ಐಲ ಕ್ಷೇತ್ರದ ಸಭಾಂಗಣದಲ್ಲಿ ವಿವಾಹಿತರಾದ ದಂಪತಿಗಳು ಸಂಜೆ ವೇಳೆ ಡೈರೆಕ್ಟ್ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾವಣೆ.
ಏಪ್ರಿಲ್ 27, 2024
0
ಐಲ ಕ್ಷೇತ್ರದ ಸಭಾಂಗಣದಲ್ಲಿ ವಿವಾಹಿತರಾದ ದಂಪತಿಗಳು ಸಂಜೆ ವೇಳೆ ಡೈರೆಕ್ಟ್ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾವಣೆ.
ಮಂಜೇಶ್ವರ: ಲೋಕಸಭಾ ಚುನಾವಣೆಯ ಮತದಾನ ನಿನ್ನೆ ಬಿರುಸಿನಿಂದ ನಡೆದಿದ್ದು, ಸುಡುವ ಬಿಸಿಲನ್ನು ಕೂಡಾ ಲೆಕ್ಕಿಸದೆ ಮತದಾರರು ಉತ್ಸಾಹದಿಂದ ಬಂದು ಮತದಾನ ಮಾಡಿ ತೆರಳಿದ್ದರು. ಹೊರದೇಶದಲ್ಲಿರುವ ಕೆಲವರು ತಮ್ಮೂರಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರೆ, ದೇಶದ ವಿವಿಧ ಜಿಲ್ಲೆಗಳಲ್ಲಿರುವವರು ಕೂಡಾ ನಿನ್ನೆ ಮನೆಗೆ ಆಗಮಿಸಿ, ತಮ್ಮ ಕಾರ್ಯ ಕ್ಷೇತ್ರದಲ್ಲಿ ಮತ ಚಲಾಯಿಸಿದ ವಿವರಗಳಿವೆ. ಇದಲ್ಲದೆ ವಿಶೇಷಚೇತನರು, ವೃದ್ದರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸಿದರು. ಈ ನಡುವೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ದಂಪತಿಗಳು ಮದುವೆ ಕಾರ್ಯ ಮುಗಿಸಿ, ಮನೆಗೆ ತೆರಳದೆ ದಂಪತಿಗಳು ಮಂಟಪದಿಂದ ನೇರ ತಮ್ಮ ಮತಗಟ್ಟೆಗೆ ಬಂದು ತಮ್ಮ ತಮ್ಮ ಬೂತ್ ನಲ್ಲಿ ಮತ ಚಲಾಯಿಸಿದ ಘಟನೆ ನಿನ್ನೆ ಸಂಜೆ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ಗ್ರಾಮ ಪಂಚಾಯತ್ ಗೊಳಪಟ್ಟ 12 ನೇ ವಾರ್ಡ್ ನಾಯ್ಕಪ್ ಬಳಿಯ ನಾರಾಯಣಮಂಗಲ ನಿವಾಸಿ ನಿವೃತ ಪೋಸ್ಟ್ ಮ್ಯಾನ್ ಶಿವರಾಮ ಶೆಟ್ಟಿ - ಸುಜಾತ ದಂಪತಿ ಪುತ್ರ ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿರುವ ವರನಾದ ಚಿ. ದೀಪಕ್ ಶೆಟ್ಟಿಯ ವಿವಾಹವು ಕುಂಬಳೆ ಇಚ್ಛಿಲಂಪಾಡಿ ನಿವಾಸಿ ಉದಯ ಚಂದ್ರ ಆಳ್ವ ಕಲ್ಕಡಿ ಯವರ ಪುತ್ರಿ ಚಿ. ಸೌ. ಶಿಲ್ಪಾ ಜೊತೆ ಉಪ್ಪಳ ಐಲ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು. ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳು ಸಂಜೆ 5 ಗಂಟೆ ಸಮಯಕ್ಕೆ ಮನೆಗೆ ತೆರಳದೆ ನೇರ ತಮ್ಮ ಮತಗಟ್ಟೆಯ ಕೇಂದ್ರವಾದ ಕುಂಬಳೆ ನಾರಾಯಣಮಂಗಲ ಎ.ಎಲ್. ಪಿ.ಎಸ್ ಶಾಲೆಗೆ ತೆರಳಿ ತಮ್ಮಿಬ್ಬರ ಪ್ರತ್ಯೇಕ ಬೂತ್ ಗಳಲ್ಲಿ ಮತದಾನಗೈದು ಮದುವೆ ಮನೆಗೆ ತೆರಳಿದ್ದಾರೆ. ಮತಗಟ್ಟೆ 155 ರಲ್ಲಿ ದೀಪಕ್ ಮತದಾನಗೈದರೆ, ಮತಗಟ್ಟೆ 156 ರಲ್ಲಿ ಶಿಲ್ಪಾ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಆರಂಭವಾದ ಮೊದಲ ಗಂಟೆಯಲ್ಲಿಯೇ ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಉದ್ದನೆಯ ಸರತಿ ಸಾಲು ಕಂಡು ಬಂತು. ಕುಂಜತ್ತೂರು, ಉದ್ಯಾವರ, ಮಂಜೇಶ್ವರ, ಉಪ್ಪಳ, ಕುಂಬಳೆ ಕಾಸರಗೋಡು ಸೇರಿದಂತೆ ಎಲ್ಲಾ ಮತಗಟ್ಟೆಗಳಲ್ಲೂ ಉದ್ದನೆಯ ಸರತಿ ಸಾಲು ಕಂಡು ಬಂತು. ಸುಡುವ ಉರಿ ಬಿಸಿಲಿನಲ್ಲೂ ಮತದಾರರು ಮತವನ್ನು ಚಲಾಯಿಸಲು ಬೆವರನ್ನು ಒರೆಸಿಕೊಂಡು ಸೆಕೆಯನ್ನು ಸಹಿಸಿ ಕೊಂಡು ಮತವನ್ನು ಚಲಾಯಿಸಿದರು. ಕೇರಳದ ಮೊದಲ ಮತಗಟ್ಟೆ ಕೇಂದ್ರವಾದ ಬೂತ್ ನಂಬ್ರ ಒಂದು ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಕೂಡಾ ಮತದಾರರ ಸರದಿ ಸಾಲು ಕಂಡು ಬಂತು. ಕಾಸರಗೋಡು ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರು ತಮ್ಮ ಸ್ವಂತ ಬೂತ್, ಮಂಜೇಶ್ವರ ಕ್ಷೇತ್ರದ ಬೂತ್ 43 ರಲ್ಲಿ ಪತಿ ಶಶಿಧರರೊಂದಿಗೆ ಮತ ಚಲಾಯಿಸಿದರು. ಯು.ಡಿ.ಎಫ್ ಅಭ್ಯರ್ಥಿ ರಾಜಮೋಹನ್ ಉನ್ನಿತಾನ್
ಪಡನ್ನಕ್ಕಾಡ್ ಎಸ್.ಎನ್.ಟಿ.ಟಿ.ಸಿ ಯ 170 ನೇ ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಎಲ್.ಡಿ.ಎಫ್ ಅಭ್ಯರ್ಥಿ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಮುಜಕೊಂ ಜಿ.ಯು.ಪಿ ಶಾಲೆಯ 35 ನೇ ಬೂತ್‌ನಲ್ಲಿ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸಲ ಎಲ್. ಡಿ. ಎಫ್ ಐತಿಹಾಸಿಕ ಗೆಲುವನ್ನು ಸಾಧಿಸಲಿರುವುದಾಗಿ ಅವರು ಹೇಳಿದರು.