ಸೇವಾಭಾರತಿ ಬದಿಯಡ್ಕ ಪಂಚಾಯತ್ ಘಟಕದಿಂದ ರಕ್ತದಾನ ಶಿಬಿರ.
ಜೂನ್ 29, 2025
0
ಸೇವಾಭಾರತಿ ಬದಿಯಡ್ಕ ಪಂಚಾಯತ್ ಘಟಕದಿಂದ ರಕ್ತದಾನ ಶಿಬಿರ.
ಬದಿಯಡ್ಕ: ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ಅತೀಮುಖ್ಯ. ಪ್ರತಿಯೊಂದು ಘಟ್ಟವನ್ನೂ ಸುಧಾರಿಸಿಕೊಂಡು ಮುಂದುವರಿಯುತ್ತಾ ಸಮಾಜಮುಖಿಯಾಗಿ ಜೀವಿಸಬೇಕು. ನಿಸ್ವಾರ್ಥ ಮನೋಭಾವದ ಸೇವಾಕಾರ್ಯವು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸಂಘಟನೆಯ ಮೂಲಕ ನಿರಂತರ ಸೇವಾ ಮನೋಭಾವವನ್ನು ಹೊಂದಿರುವ ಯುವಕರು ನಾಡಿಗೆ ಮಾದರಿಯಾಗಿದ್ದಾರೆ ಎಂದು ಧಾರ್ಮಿಕ ಸಾಮಾಜಿಕ ಪ್ರಮುಖರಾದ ಜಯದೇವ ಖಂಡಿಗೆ ಹೇಳಿದರು.
ಸೇವಾ ಭಾರತಿ ಬದಿಯಡ್ಕ ಪಂಚಾಯತ್ ಘಟಕದ ನೇತೃತ್ವದಲ್ಲಿ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯ ಸಹಯೋಗದೊಂದಿಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಇಂದು ಜರಗಿದ ರಕ್ತದಾನ ಶಿಬಿರಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಕಾಸರಗೋಡು ಬ್ಲಡ್ ಬೇಂಕ್ ವೈದ್ಯಾಧಿಕಾರಿ ಸೌಮ್ಯಾ ಅವರು ಮಾತನಾಡಿ ಆರೋಗ್ಯವಂತ ವ್ಯಕ್ತಿಯು ವರ್ಷಕ್ಕೆ ನಾಲ್ಕು ಬಾರಿ ರಕ್ತದಾನ ಮಾಡಬಹುದಾಗಿದೆ. ಅನೇಕರು ಹೆದರಿಕೆಯಿಂದ ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಯುವಕರು ಈ ನಿಟ್ಟಿನಲ್ಲಿ ಜಾಗೃತರಾಗಬೇಕು. ಸೇವಾಭಾರತಿಯಂತಹ ಸಂಘಟನೆಗಳ ಮೂಲಕ ಎಲ್ಲರೂ ಸಂಘಟಿತರಾಗಿ ಯಾವುದೇ ಸಂದರ್ಭದಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು. ಸೇವಾಭಾರತಿ ಬದಿಯಡ್ಕ ಪಂಚಾಯಿತಿ ಘಟಕದ ಅಧ್ಯಕ್ಷ ಸದಾಶಿವ ಮಾಸ್ತರ್ ಬೇಳ, ಕಾರ್ಯದರ್ಶಿ ವಕೀಲ ಗಣೇಶ್ ಬಿ. ಬದಿಯಡ್ಕ, ಆರೆಸ್ಸೆಸ್ ಖಂಡಚಾಲಕ್ ರಮೇಶ್ ಕಳೇರಿ, ಸೇವಾಭಾರತಿ ಕಾಸರಗೋಡು ಜಿಲ್ಲಾ ರಕ್ತನಿಧಿ ಪ್ರಮುಖ ದಯಾನಂದ ಭಟ್ ಕಾಸರಗೋಡು, ಸೇವಾಭಾರತಿ ಸ್ವಯಂಸೇವಕರು ಪಾಲ್ಗೊಂಡಿದ್ದರು. ಒಟ್ಟು 85 ಮಂದಿ ರಕ್ತದಾನಕ್ಕೆ ಸಿದ್ಧರಿದ್ದರು. ಅರ್ಹರಾದ 65 ಮಂದಿ ದಾನಿಗಳು ರಕ್ತದಾನ ಮಾಡಿದರು. ಸೇವಾಭಾರತಿಯ ನೇತೃತ್ವದಲ್ಲಿ ನೀರ್ಚಾಲಿನಲ್ಲಿ ಈ ಹಿಂದೆಯೂ ನಾಲ್ಕು ಬಾರಿ ರಕ್ತದಾನ ಶಿಬಿರ ನಡೆದಿತ್ತು.