ವರ್ಕಾಡಿ ಚರ್ಚ್ ಗೆ ನುಗ್ಗಿದ್ದ ಕಳ್ಳ. ಕಾಣಿಕೆ ಡಬ್ಬಿಯಲ್ಲಿದ್ದ ಹಣ ದೋಚಿ ಪರಾರಿ. ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಪತ್ತೆ.
ಅಕ್ಟೋಬರ್ 21, 2024
0
ವರ್ಕಾಡಿ ಚರ್ಚ್ ಗೆ ನುಗ್ಗಿದ್ದ ಕಳ್ಳ. ಕಾಣಿಕೆ ಡಬ್ಬಿಯಲ್ಲಿದ್ದ ಹಣ ದೋಚಿ ಪರಾರಿ. ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಪತ್ತೆ.
ಮಂಜೇಶ್ವರ: ಸುಮಾರು 130 ವರ್ಷಗಳ ಇತಿಹಾಸವಿರುವ ಪವಾಡ ಪುರುಷ ಏಸು ಕ್ರಿಸ್ತರ ಕಿರು ಹೃದಯ ದೇವಾಲಯವಾದ ವರ್ಕಾಡಿ ಚರ್ಚ್ ನಲ್ಲಿ ಇಂದು ಮುಂಜಾನೆ 3 ಗಂಟೆ ವೇಳೆ ಕಳವು ಕೃತ್ಯ ನಡೆದಿದೆ. ಚರ್ಚ್ ಮುಂಭಾಗದ ಬಸ್ ತಂಗುದಾಣದ ಹಿಂದೆ ತನ್ನ ಸ್ಕೂಟರ್ ನಿಲ್ಲಿಸಿ ಚರ್ಚ್ ಗೆ ಬಂದ ಕಳ್ಳನೊಬ್ಬ, ಚರ್ಚ್ ನ ಹೊರಗಡೆಯ ಸಿಟೌಟ್ ನ ಪ್ರಮುಖ ಪ್ರವೇಶ ದ್ವಾರದ ಅಕ್ಕ ಪಕ್ಕದಲ್ಲಿರುವ ಏಸು ಕ್ರಿಸ್ತರ ಮೂರ್ತಿ ಹಾಗೂ ವೇಲಂಕಣಿ ಮಾತೆಯ ವಿಗ್ರಹದ ಮುಂಭಾಗದಲ್ಲಿದ್ದ ಎರಡು ಪ್ರತ್ಯೇಕ ಕಾಣಿಕೆ ಡಬ್ಬಿಗಳನ್ನು ಮುರಿದು, ಅದರಲ್ಲಿದ್ದ ಹಣವನ್ನು ದೋಚಿ ಸುಮಾರು 30 ಮೀಟರ್ ದೂರದ ವರೆಗೆ ತೆರಳಿ, ಕಾಣಿಕೆ ಡಬ್ಬಿಯನ್ನು ಚರ್ಚ್ ಕಂಪೌಂಡ್ ನಲ್ಲಿ ಉಪೇಕ್ಷಿಸಿ ಪರಾರಿಯಾದ ಘಟನೆ ನಡೆದಿದೆ. ಅಲ್ಲದೇ ಚರ್ಚ್ ನ ಒಳ ನುಗ್ಗಲು ಪ್ರಯತ್ನ ಪಟ್ಟಿದ್ದ ಆದರೆ ವಿಫಲವಾಗಿ ಹಿಂತಿರುಗಿದ್ದಾನೆ. ಈ ಎಲ್ಲಾ ದೃಶ್ಯಗಳು ಚರ್ಚ್ ನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇಂದು ಬೆಳಗ್ಗೆ 6.00 ಗಂಟೆಗೆ ಪೂಜೆಗೆಂದು ಆಗಮಿಸಿದ ಭಕ್ತರಿಗೆ ಕಳವು ನಡೆದ ಬಗ್ಗೆ ಅರಿವಾಗಿ ಚರ್ಚ್ ಫಾದರ್ ಬೇಸಿಲ್ ವಾಸ್ ರಿಗೆ ವಿಷಯ ತಿಳಿಸಿದ್ದು, ಕೂಡಲೇ ಆಗಮಿಸಿದ ಚರ್ಚ್ ಫಾದರ್ ಚರ್ಚ್ ನ ಆಡಳಿತ ಮಂಡಳಿ ಮುಖೇನ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಸಿಸಿ ಕ್ಯಾಮೆರಾದ ದೃಶ್ಯವನ್ನು ಆಧರಿಸಿ ಮುಂದಿನ ತನಿಖೆಯನ್ನ ಕೈಗೊಳ್ಳಲಿರುವರು. ಇತ್ತೀಚೆಗೆಯಿಂದ ವರ್ಕಾಡಿ ಹಾಗೂ ಮೀಂಜ ಪಂಚಾಯತ್ ನ ಆಸು ಪಾಸಿನಲ್ಲಿ ಪದೇ ಪದೇ ಕಳವು ಕೃತ್ಯಗಳು ನಡೆಯುತ್ತಿದ್ದೆ. ಇದೀಗ ಕಳ್ಳರು ಆರಾಧನಾಲಯಗಳನ್ನು ಹಾಗೂ ಬ್ಯಾಂಕ್ ಗಳನ್ನು ಕೇಂದ್ರಿಕರಿಸಿಕೊಂಡು ಕಳವು ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇತ್ತಿಚೆಗೆಯಷ್ಟೇ ಮೀಂಜ ಪಂಚಾಯತ್ ನಲ್ಲಿ ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನ ಹಾಗೂ ತಲೇಕಳ ದೇವಸ್ಥಾನ ಮತ್ತು ವರ್ಕಾಡಿ ಪಂಚಾಯತ್ ನ ಕೊಡ್ಲಮೊಗರಿನ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಕಳವು ಕೃತ್ಯ ನಡೆದಿತ್ತು. ಇದೀಗ ಮತ್ತೆ ಕಳ್ಳರ ಕೃತ್ಯ ಚುರುಕುಗೊಂಡಿದೆ. ಜನರು ಆತಂಕ ಪಡುವಂತಾಗಿದೆ.