ಕಾಸರಗೋಡು ಜಿಲ್ಲಾ ವಾರ್ತಾ ಇಲಾಖೆಯ ಛಾಯಾಗ್ರಾಹಕರಾಗಿ ಕನ್ನಡಿಗ, ಶ್ರೀ ಕಾಂತ್ ಕಾಸರಗೋಡು ಸತತ ಮೂರನೇ ಬಾರಿಗೆ ಆಯ್ಕೆ.
ಜೂನ್ 30, 2025
0
ಕಾಸರಗೋಡು ಜಿಲ್ಲಾ ವಾರ್ತಾ ಇಲಾಖೆಯ ಛಾಯಾಗ್ರಾಹಕರಾಗಿ ಕನ್ನಡಿಗ, ಶ್ರೀ ಕಾಂತ್ ಕಾಸರಗೋಡು ಸತತ ಮೂರನೇ ಬಾರಿಗೆ ಆಯ್ಕೆ.
ಮಂಜೇಶ್ವರ: ಕಾಸರಗೋಡು ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಛಾಯಾಗ್ರಾಹಕರಾಗಿ ಶ್ರೀ ಕಾಂತ್ ಕಾಸರಗೋಡು ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಕಳೆದ 25 ವರ್ಷಗಳಿಂದ ಛಾಯಾಗ್ರಾಹಕರಾಗಿ ಕಾಸರಗೋಡಿನಲ್ಲಿ ದುಡಿಯುತ್ತಿದ್ದ ಶ್ರೀಕಾಂತ್ ರವರು 22 ವರ್ಷಗಳಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಯಾವುದೆ ದುರ್ಘಟನೆ, ಸಂದಿಗ್ಧ ಪರಿಸ್ಥಿತಿ, ತುರ್ತು ಪರಿಸ್ಥಿತಿಯ ವೇಳೆಯೂ, ಛಾಯಾಚಿತ್ರವನ್ನು ಚಾಕಚಕ್ಯತೆಯಿಂದ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಪೊಲೀಸ್ ಇಲಾಖೆ ಸೇರಿದಂತೆ ಹಲವು ವಿಭಾಗದ ಅಧಿಕಾರಿ ವರ್ಗಗಳಿಂದ ಅಭಿಮಾನಕ್ಕೆ ಒಳಪಟ್ಟಿದ್ದರು. ಎಳವೆಯಲ್ಲಿಯೇ ಯಕ್ಷಗಾನ, ನಾಟಕ, ಕಲಾವಿದರಾಗಿ ರಂಗಭೂಮಿಯಲ್ಲಿ ಬಣ್ಣ ಹಚ್ಚುವುದರೊಂದಿಗೆ ಕಲೆಯ ಜೊತೆ ಛಾಯಾಚಿತ್ರಗಾರರಾಗಿ ಬೆಳೆದು ಬಂದರು. ಹಿರಿಯ ಛಾಯಾಗ್ರಹಕರಾದ ಕಾಸರಗೋಡು ಇನ್ಸೈಟ್ ನ ದಿನೇಶ್ ರವರಲ್ಲಿ ಹಲವು ವರ್ಷಗಳಿಂದ ವೃತ್ತಿ ಪ್ರಾರಂಭಿಸಿದ ಶ್ರೀಕಾಂತ್ ರವರು ನಗರದ ಕೋಟೆಕಣಿಯಲ್ಲಿ "ರಾಯಲ್ ಕ್ರಿಯೇಷನ್" ಹೆಸರಿನಲ್ಲಿ ಸ್ವಂತ ಸ್ಟುಡಿಯೊ ತೆರೆದರು. ಈಗಿನ ಡಿಜಿಟಲ್ ಯುಗಕ್ಕೆ ಹೊಂದಿಕೊಂಡು ಮದುವೆ, ಉಪನಯನ, ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಛಾಯಾಚಿತ್ರ ತೆಗೆಯುವಲ್ಲಿ ನಿಪುಣರಾಗಿರುವರು. ಈ ನಡುವೆ ಪತ್ರಿಕಾ ಛಾಯಾಗ್ರಾಹಕರಾಗಿದ್ದು, ಉದಯವಾಣಿ, ತರಂಗ, ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ತೆಗೆದ ಚಿತ್ರಗಳು ಮುಖ ಪುಟಗಳಲ್ಲಿ ಪ್ರಕಟಗೊಂಡಿದೆ. ಆಲ್ ಕೇರಳ ಪೋಟೋಗ್ರಾಫರ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸದಸ್ಯ, ಎರಡು ವರ್ಷಗಳ ಕಾಲ ಯುನಿಟ್ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕರೋನಾ ಸಮಯದಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಣೆ, ಔಷಧ ವಿತರಣೆಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ಛಾಯಾಗ್ರಾಹಕ ಸೇವೆಗೆ ಉದಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾದ ಪ್ರದೀಪ್ ಬೇಕಲ್ ರವರು ಸಾಥ್ ನೀಡಿದ್ದರು. ಇದರ ಜೊತೆ ಕಾಸರಗೋಡು ವಿಶ್ವ ಬ್ರಾಹ್ಮಣ ಯುವಕ ಸಂಘದ ಉಪಾಧ್ಯಕ್ಷ, ಶ್ರೀ ರಮಾನಾಥ ಸಾಂಸ್ಕೃತಿಕ ಭವನ ಸಮಿತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಜಾಗೃತಿ ಸಮಿತಿ, ಜೆಸಿಐ ಕಾಸರಗೋಡು, ಆಲ್ ಕೇರಳ ಮೋಹನ್ ಲಾಲ್ ಫ್ಯಾನ್ಸ್ ನ ಕಾಸರಗೋಡು ಜಿಲ್ಲಾ ಸದಸ್ಯ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಸಮಿತಿಯಲ್ಲಿ ಶ್ರೀಕಾಂತ್ ಸಕ್ರೀಯರಾಗಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ನಿವಾಸಿ ದಿ. ರಾಮದಾಸ ಆಚಾರ್ಯ - ಸರೋಜಿನಿ ದಂಪತಿಗಳ ಪುತ್ರನಾಗಿರುವ ಶ್ರೀಕಾಂತ್ ರವರು ಪತ್ನಿ ನಿರ್ಮಲರ ಜೊತೆ ಸುಖಿಜೀವನ ಸಾಗಿಸುತ್ತಿದ್ದಾರೆ.