ಫಾಝಿಲ್ ಕೊಲೆ ಆರೋಪಿ, ರೌಡಿ ಶೀಟರ್ ಸುಹಾಸ್ ಶೆಟ್ಟಿ ದುಷ್ಕರ್ಮಿಗಳ ತಂಡದಿಂದ ತಲವಾರಿನಲ್ಲಿ ಕೊಚ್ಚಿ ಕೊಲೆ.
ಮೇ 02, 2025
0
ಫಾಝಿಲ್ ಕೊಲೆ ಆರೋಪಿ, ರೌಡಿ ಶೀಟರ್ ಸುಹಾಸ್ ಶೆಟ್ಟಿ ದುಷ್ಕರ್ಮಿಗಳ ತಂಡದಿಂದ ತಲವಾರಿನಲ್ಲಿ ಕೊಚ್ಚಿ ಕೊಲೆ.
ಮಂಗಳೂರು: ಫಾಝಿಲ್ ಕೊಲೆ ಆರೋಪಿ ರೌಡಿ ಶೀಟರ್ ಸುಹಾಸ್ ಶೆಟ್ಟಿ(32) ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು ತಲವಾರಿನಲ್ಲಿ ಕೊಚ್ಚಿ ಕೊಲೆಗೈದ ಘಟನೆ ನಗರದ ಹೊರವಲಯದ ಬಜ್ಪೆ ಕಿನ್ನಿಪದವು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಎರಡು ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ನಡೆದಿದ್ದ ಫಾಜಿಲ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮತ್ತು ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆಯಾಗಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಹತ್ಯೆ ನಡೆದಿತ್ತು ಎನ್ನಲಾಗಿತ್ತು. ಇದೀಗ ಫಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ತಲವಾರಿನಿಂದ ದಾಳಿ ನಡೆಸಿದ ದುಷ್ಕರ್ಮಿಗಳು, ನಡುರಸ್ತೆಯಲ್ಲೇ ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ದಾರೆ. ಕೊಲೆಯ ವಿಡಿಯೋ ಸೆರೆಯಾಗಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, "ರಾತ್ರಿ 8:27ರ ಸುಮಾರಿಗೆ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಕಿನ್ನಿಪದವು ಕ್ರಾಸ್ ಬಳಿ ಹಲ್ಲೆ ಮತ್ತು ಕೊಲೆ ಘಟನೆ ವರದಿಯಾಗಿದೆ. ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಮತ್ತು ಶಶಾಂಕ್ ಅವರೊಂದಿಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸುಹಾಶ್ ಶೆಟ್ಟಿ ಎಂಬಾತನನ್ನು ಸ್ವಿಫ್ಟ್ ಕಾರು ಮತ್ತು ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದುಷ್ಕರ್ಮಿಗಳ ಗುಂಪು ತಡೆದಿದೆ. 5 ರಿಂದ 6 ಮಂದಿ ದುಷ್ಕರ್ಮಿಗಳು ಸುಹಾಶ್ ಶೆಟ್ಟಿ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ನಡೆಸಿ ಗಂಭೀರ ಗಾಯಗಳನ್ನುಂಟುಮಾಡಿದ್ದಾರೆ. ಅವರನ್ನು ತಕ್ಷಣ ಎ.ಜೆ.ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಹಲವಾರು ತಂಡಗಳನ್ನು ರಚಿಸಲಾಗಿದೆ" ಎಂದು ತಿಳಿಸಿದರು. ಸುಹಾಸ್ ಶೆಟ್ಟಿ ವಿರುದ್ಧ ಕೊಲೆ, ಕೊಲೆ ಯತ್ನ ಪ್ರಕರಣಗಳಿವೆ. ಆಸ್ಪತ್ರೆ ಮುಂಭಾಗ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.