ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ವರ್ಷಾವಧಿ ಉತ್ಸವ, ಐತಿಹಾಸಿಕ ಬಂಡಿ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ನಾಂದಿ.
ಮೇ 08, 2025
0
ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ವರ್ಷಾವಧಿ ಉತ್ಸವ, ಐತಿಹಾಸಿಕ ಬಂಡಿ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ನಾಂದಿ.
ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ವರ್ಷಾವಧಿ ಉತ್ಸವ ಹಾಗೂ ಐತಿಹಾಸಿಕ ಬಂಡಿ ಮಹೋತ್ಸವಕ್ಕೆ ಇಂದು ರಾತ್ರಿ ಧ್ವಜಾರೋಹಣದೊಂದಿಗೆ ನಾಂದಿ ಹಾಡಲಾಯಿತು. ಈ ವೇಳೆ ಕ್ಷೇತ್ರದ ತಂತ್ರಿಗಳು, ಗಡಿ ಪ್ರಧಾನರು, ಕ್ಷೇತ್ರದ ಅರ್ಚಕರು, ಆಚಾರ ಪಟ್ಟವರು, ಗುರಿಕಾರರು, ಹತ್ತು ಸಮಸ್ತರು, ಆಡಳಿತ ಸಮಿತಿ, ಟ್ರಸ್ಟಿಗಳು, ಉತ್ಸವ ಸಮಿತಿ ಪದಾಧಿಕಾರಿಗಳು ಸಾವಿರಾರು ಮಂದಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು. ಇನ್ನು ನಾಲ್ಕು ದಿನಗಳ ಕಾಲ ನಡೆಯುವ ಜಾತ್ರ ಮಹೋತ್ಸವಕ್ಕೆ ಊರ ಪರವೂರ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗುವರು.
ಉದ್ಯಾವರ ಮಾಡ ಜಾತ್ರೆಯೆಂದರೆ ದೇಶ - ವಿದೇಶದಲ್ಲಿ ಖ್ಯಾತಿಯನ್ನು ಪಡೆದಿದ್ದು, ಉದ್ಯಾವರ ಮಾಡ, ಕುಂಜತ್ತೂರು, ಕಣ್ವತೀರ್ಥ ಮಂಜೇಶ್ವರ ಪರಿಸರದ ನಿವಾಸಿಗಳು ಉದ್ಯೋಗ ನಿಮಿತ್ತವಾಗಲಿ, ಅಥವಾ ವಿವಾಹಿತರಾಗಿ ಬೇರೆ ಯಾವುದೇ ಊರಿನಲ್ಲಿದ್ದರೂ, ಉತ್ಸವದ ಸಮಯದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಪಾಲ್ಗೊಳ್ಳುವುದು ಪಾರಂಪಾರ್ಯ ವಾಡಿಕೆಯಾಗಿದೆ. ಈ ಗ್ರಾಮದವರು ಕೂಡ ಯಾವುದೇ ಊರಿನಲ್ಲಿದ್ದರು ದೇಶ - ವಿದೇಶದಲ್ಲಿದ್ದರು ಉತ್ಸವದ ವೇಳೆ ಆಗಮಿಸಿ ದೇವರಿಗೆ ಮಲ್ಲಿಗೆ ಹೂವು, ಹರಕೆ ಸಲ್ಲಿಸುವುದರೊಂದಿಗೆ, ಶ್ರೀ ಕ್ಷೇತ್ರದ ಪ್ರಾರ್ಥನೆಯ ಬಳಿಕ ಸಿಗುವ ಗಂಧ ಪ್ರಸಾದಕ್ಕೆ ಫಲವಿದೆ. ಯಾವುದೇ ಜ್ವರ ಅಥವಾ ಇನ್ನಿತರ ರೋಗ ರುಜಿನಗಳಿಗೆ ಇಲ್ಲಿ ಪ್ರಾರ್ಥನೆ ಮಾಡಿ, ಸಿಗುವ ಗಂಧ ಪ್ರಸಾದದಿಂದ ದೈವವನ್ನು ನೆನೆದು ಹಚ್ಚಿದರೆ ಹಾಗೂ ಅದೇ ಗಂಧ ಪ್ರಸಾದವನ್ನು ನೀರಿನಲ್ಲಿ ಹಾಕಿ ಕುಡಿದರೆ ವಾಸಿಯಾಗುತ್ತದೆ ಎಂಬುದು ಅದೆಷ್ಟೋ ಭಕ್ತರ ನಂಬಿಕೆಯಾಗಿದೆ. ಸರ್ವ ಧರ್ಮದ ಭಕ್ತರ ಅಭೀಷ್ಟೇಗಳು ಈಡೇರುವ ಶ್ರೀ ಕ್ಷೇತ್ರಕ್ಕೆ ಸರ್ವಧರ್ಮದವರು ಬಂದು ಪ್ರಾರ್ಥಿಸುತ್ತಾರೆ. ಇದೀಗ ವರ್ಷಾವಧಿ ಉತ್ಸವಕ್ಕೆ ಇಂದು ರಾತ್ರಿಯಿಂದ ಚಾಲನೆ ದೊರಕಿದ್ದು, ಈ ತಿಂಗಳ 14 ರ ವರೆಗೆ ನಡೆಯಲಿದೆ. ಇಂದು ರಾತ್ರಿ ಧ್ವಜಾರೋಹಣ ಬಳಿಕ ಕಂಚಿಲ ಸೇವೆ, ಕಟ್ಟೆದೀಪಾರಾಧನೆ ನಡೆಯಿತು. ನಾಳೆ ಸಂಜೆ 5.30 ಕ್ಕೆ ಯಕ್ಷಗಾನ ತಾಳಮದ್ದಳೆ, ರಾತ್ರಿ 9 ಕ್ಕೆ ಸಂಗೀತ ರಸಮಂಜರಿ ಬಳಿಕ 1 ರಿಂದ ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ, 10 ರಂದು ಬೆಳಿಗ್ಗೆ 9 ಕ್ಕೆ ತಮ್ಮ ದೈವದ ನೇಮ, ಮಧ್ಯಾಹ್ನ 12.30 ಕ್ಕೆ ಮಡಸ್ಥಾನ, ಸಂಜೆ 4.30 ಕ್ಕೆ ಮುಂಡತ್ತಾಯ ದೈವದ ನೇಮ, ರಾತ್ರಿ 7 ಕ್ಕೆ ನಡುಬಂಡಿ ಉತ್ಸವ, ಅಣ್ಣ ದೈವದ ನೇಮ, 11 ರಂದು ಬೆಳಿಗ್ಗೆ 10 ಕ್ಕೆ ತಮ್ಮ ದೈವದ ನೇಮ, ಸಂಜೆ 4 ಕ್ಕೆ ಮುಂಡತ್ತಾಯ ದೈವದ ನೇಮ, 6.30 ಕ್ಕೆ ಕಡೆಬಂಡಿ ಉತ್ಸವ, ತಮ್ಮ ದೈವದ ನೇಮ, ಸುಡುಮದ್ದು ಪ್ರದರ್ಶನ, 14 ರಂದು ರಾತ್ರಿ 10 ಕ್ಕೆ ಧ್ವಜಾವರೋಹಣ ನಡೆಯಲಿದೆ.
ಚಿತ್ರಗಳು: ಪವನ್ ಆಚಾರ್ಯ ಮೋರ್ಕಳ.