ಮಾಲಾಧಾರಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವ ಶ್ವಾನ: ಅಯ್ಯಪ್ಪನ ಸನ್ನಿಧಿ ಶಬರಿಮಲೆಗೆ ಪಯಣ. ಇಂದು ಮಂಜೇಶ್ವರ ತಲುಪಿದ "ಚಿನ್ನಿ" ಶ್ವಾನ.
ನವೆಂಬರ್ 18, 2023
0
ಮಾಲಾಧಾರಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವ ಶ್ವಾನ: ಅಯ್ಯಪ್ಪನ ಸನ್ನಿಧಿ ಶಬರಿಮಲೆಗೆ ಪಯಣ. ಇಂದು ಮಂಜೇಶ್ವರ ತಲುಪಿದ "ಚಿನ್ನಿ" ಶ್ವಾನ.
ಮಂಜೇಶ್ವರ: ಇರುಮುಡಿ ಹೊತ್ತು ಸಾಗುತ್ತಿರೋ ಅಯ್ಯಪ್ಪ ಭಕ್ತರು. ಮಾಲಾಧಾರಿಗಳನ್ನೇ ಅನುಸರಿಸುತ್ತಾ ನಾ ಮುಂದು ತಾ ಮುಂದು ಎಂದು ಹೆಜ್ಜೆ ಹಾಕುತ್ತಿರುವ ಶ್ವಾನ. ಇದರ ನಿಷ್ಠೆ, ಭಕ್ತಿ ಕಂಡರೆ ನೀವೂ ಅಚ್ಚರಿಪಡುವುದು ಗ್ಯಾರೆಂಟಿ.! ಲಕ್ಷಾಂತರ ಭಕ್ತರು ಮಾಲಾಧಾರಿಯಾಗಿ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿರುತ್ತಾರೆ. ಆದರೆ ಬೀದಿನಾಯಿಯೊಂದು ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ 600 ಕಿ.ಮೀ ದೂರದಿಂದ ಗುರುಸ್ವಾಮಿಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಅಯ್ಯಪ್ಪನ ದರ್ಶನಕ್ಕೆ ಹೊರಟಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೇಕ್ಕೆರಿ ಸಿದ್ದಾಪುರ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ 9 ಮಂದಿ ಅಯ್ಯಪ್ಪ ಭಕ್ತರು ಗುರುಸ್ವಾಮಿಗಳಾದ ಶೆಟ್ಟಿಯ್ಯಪ್ಪ ಭೀಮಪ್ಪ ವಡ್ಡರ್ (42) ಎಂಬವರ ನೇತೃತ್ವದಲ್ಲಿ ಈ ಬಾರಿ ಶಬರಿಮಲೆ ಪಾದಯಾತ್ರೆ ಕೈಗೊಳ್ಳುತ್ತಿದ್ದು, ಇವರ ಜೊತೆ "ಚಿನ್ನಿ" ಎಂಬ ಶ್ವಾನ, ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಈ ಶ್ವಾನವನ್ನು ಯಾರೂ ಸಾಕಿಲ್ಲ. ಬೀದಿಯಲ್ಲಿ ಆಹಾರ ಸೇವಿಸಿಕೊಂಡು ಇರುವ ಈ ನಾಯಿ ಇದೀಗ ಶಬರಿಮಲೆಗೆ ಹೊರಟು ನಿಂತಿದೆ. ಗುರು ಸ್ವಾಮಿಗಳಾದ ಶೆಟ್ಟಿಯ್ಯಪ್ಪ ಭೀಮಪ್ಪ ವಡ್ಡರ್ ರ ಜೊತೆ ಇತರ ಅಯ್ಯಪ್ಪ ವೃತಧಾರಿಗಳಾದ ಕಾಳಪ್ಪ ಮಾದೇವ ಬಡಿಗೇರ್, ಪಕೀರಪ್ಪ ಕೀಳಿಕೆತ್ತ, ಸಂಜು ತಲುವಾರ್, ಸತೀಶ್ ಮುಗುದಂ, ಸಿದ್ದು ಗಡದೆ, ಶ್ರೀಮಂತ್ ಗೊಂಡೆ, ಮೋನೀಶ್ ಬಡಿಗೇರ್, ಮಹಾದೇವ ಚೌಹಾನ್, ಓಂಕಾರ ಬೋವಿ ಎಂಬವರುಗಳ ತಂಡದೊಂದಿಗೆ ನವೆಂಬರ್ 1 ರಂದು ಮಾಲೆ ಧರಿಸಿ, ನವೆಂಬರ್ 4 ರಂದು ಕೇರಳದ ಶಬರಿಮಲೆಗೆ ಪಾದಯಾತ್ರೆ ಮೂಲಕ ದರ್ಶನಕ್ಕೆ ಹೊರಟಿದ್ದರು. ಸುಮಾರು 30 ಕಿಲೋ ಸಂಚರಿಸುತ್ತಿರುವ ವೇಳೆ ಗೋಕಾಕ್ ತಾಲೂಕಿನ ಕಲ್ಲೋಲಿ ಗ್ರಾಮದಲ್ಲಿ ಇವರೊಂದಿಗೆ ಈ ಬೀದಿ ನಾಯಿ ಕೂಡ ಹಿಂಬಾಲಿಸತ್ತಿರುವುದು ಕಂಡು ಬಂದಿದೆ. ಬಳಿಕ 15 ಕಿಲೋ ಮೀಟರ್ ಇವರ ಹಿಂದೇನೆ ಬರುತ್ತಿರುವುದನ್ನು ಗಮನಿಸಿದ ತಂಡದ ಭಕ್ತರು ಹಾಲು ಬಿಸ್ಕೆಟ್ ನೀಡಿ ಸಲಹಿದರು. ಒಂದಷ್ಟು ದೂರ ಬಂದು ಮರಳುತ್ತೆ ಎಂದು ಅಂದುಕೊಂಡಿದ್ದ ಗುರುಸ್ವಾಮಿಗಳು ತಮ್ಮಷ್ಟಕ್ಕೆ ಪಾದಯಾತ್ರೆ ಪ್ರಾರಂಭಿಸಿದರು. ಆದರೆ, ಇವರನ್ನೇ ಹಿಂಬಾಲಿಸಿದ ಈ ಶ್ವಾನ ನೂರಾರು ಕಿ.ಮೀ ಕ್ರಮಿಸಿದರೂ ಇವರ ಸಂಘ ಬಿಡಲಿಲ್ಲ. ದೇವರ ಪೂಜೆ, ವಿಶ್ರಾಂತಿ ಹೀಗೆ ಎಲ್ಲೆಂದರಲ್ಲಿ ಸಾಥ್ ನೀಡಿದ ಈ ಶ್ವಾನ ಇವರಿಗೆ ತೊಂದರೆಯಾಗದಂತೆ ರಕ್ಷಣೆ ಮಾಡುತ್ತಾ ಇವರೊಂದಿಗೆ ಸಾಗಿದೆ. ಇವರೊಂದಿಗೆ ಹಿಂಬಾಲಿಸಿ ಇವರ ರಕ್ಷಣೆ ಮಾಡುತ್ತಾ ಬರುತ್ತಿದ್ದ ಈ ಶ್ವಾನದ ಬಗ್ಗೆ ಇವರಿಗೂ ಪ್ರೀತಿ ಹುಟ್ಟಿದೆ. ಇದರಂತೆ ತಾವು ಪಡೆಯುವ ಪ್ರಸಾದವನ್ನು ಇದಕ್ಕೂ ನೀಡಿ ಶ್ವಾನದೊಂದಿಗೆ ಪ್ರಯಾಣ ಮುಂದುವರಿಸಿದ್ದಾರೆ. ಸುಮಾರು 15 ದಿನದ ಯಾತ್ರೆಯಲ್ಲಿ 600 ಕಿಲೋ ಮೀಟರ್ ಸಂಚರಿಸಿ, ಇಂದು ಬೆಳಗ್ಗೆ ಮಂಜೇಶ್ವರ ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತಲುಪಿದರು. ಈ ವೇಳೆ ಪಾದಯಾತ್ರೆ ತಂಡ "ನಮ್ಮ ಮಂಜೇಶ್ವರ" ನ್ಯೂಸ್ ನ ಜೊತೆ ಮಾತನಾಡಿ ಈ ಬಾರಿ ನಮ್ಮೂರಿನಿಂದ ಪಾದಯಾತ್ರೆ ಮೂಲಕ ನಾವು ಶಬರಿಮಲೆಗೆ ಹೋಗಲು ನಿರ್ಧರಿಸಿದ್ದೆವು. ಪಾದಯಾತ್ರೆ ವೇಳೆ ಗ್ರಾಮದಲ್ಲಿ ಕೆಲಕಾಲ ವಿಶ್ರಾಂತಿ ಪಡೆದೆವು. ಈ ವೇಳೆ ಹೆಣ್ಣು ಬೀದಿ ನಾಯಿಯೊಂದು ನಮ್ಮ ಜೊತೆಗೂಡಿತು. ನಮ್ಮ ಪಾದಯಾತ್ರೆ ಜೊತೆಗೆ ಸಾಗುತ್ತಾ ಬಂದಿತು. ನಾಯಿಯನ್ನು ಬಿಟ್ಟು ಪಾದಯಾತ್ರೆಯಿಂದ ದೂರ ಇಡಲು ಸಾಕಷ್ಟು ಪ್ರಯತ್ನಿಸಿಸಿದೆವು. ಆದರೆ, ಅದು ಸಾಧ್ಯವಾಗಲಿಲ್ಲ. ನಾಯಿ ನಮ್ಮನ್ನು ಹಿಂಬಾಲಿಸುತ್ತಲೇ ಇತ್ತು ಎಂದು ಗುರುಸ್ವಾಮಿ ಭೀಮಪ್ಪವರು ಹೇಳಿದ್ದಾರೆ. ಇದೀಗ ನಾವು ದೇವರ ಇಚ್ಛೆ ಎಂದು ನಿರ್ಧರಿಸಿ, ಅದರೊಂದಿಗೆ ಮುಂದೆ ಸಾಗುತ್ತಿದ್ದೇವೆ. ತಮ್ಮ ಪ್ರಯಾಣದ ಮಾರ್ಗದಲ್ಲಿ ನಾಯಿಯ ವರ್ತನೆಯು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ನಾಯಿಗೆ "ಚಿನ್ನಿ" ಎಂದು ಹೆಸರಿಟ್ಟಿದ್ದೇವೆ. ಚಿನ್ನಿ ಅತ್ಯಂತ ಶಿಸ್ತುಬದ್ಧವಾಗಿ ವರ್ತಿಸುತ್ತಿದ್ದಾಳೆ. ಪಾದಯಾತ್ರೆ ವೇಳೆ ನಾವು ನಮ್ಮ ಇರುಮುಡಿ ಹಾಗೂ ಚೀಲ ವಸ್ತುಗಳನ್ನು, ಒಂದು ಸ್ಥಳದಲ್ಲಿ ಇಟ್ಟರೆ, ಅದರ ಹತ್ತಿರದಲ್ಲೇ ಮಲಗುತ್ತಾಳೆ. "ಚಿನ್ನಿ" ಕೂಡಾ ನಮ್ಮ ತಂಡದ ಭಾಗವಾಗಿರುವುದರಿಂದ, ಪ್ರಯಾಣದ ಜೊತೆಗೆ ಇದೀಗ ನಾವು ಆಹಾರ ಮತ್ತು ಬಿಸ್ಕತ್ತುಗಳನ್ನು ಇಟ್ಟುಕೊಳ್ಳುತ್ತಿದ್ದೇವೆ. ನಮ್ಮಲ್ಲಿರುವ ವಸ್ತುಗಳ ಬಗ್ಗೆ ಅವಳಿಗೆ ಗೊತ್ತಿದ್ದು, ಅವುಗಳ ರಕ್ಷಣೆ ಮಾಡುತ್ತಿದ್ದಾಳೆ. ನಾವಾಗೇ ಅವಳಿಗೆ ಕೊಡುವವರೆಗೂ ಅದನ್ನು ಮುಟ್ಟುವುದಿಲ್ಲ ಎಂದು ತಿಳಿಸಿದ್ದಾರೆ. ಪಾದಯಾತ್ರೆ ವೇಳೆ ಜನರು ಹಾಲು, ಬಿಸ್ಕೆಟ್ ನೀಡಿದರೂ ಅದು ಸ್ವೀಕರಿಸುವುದಿಲ್ಲ. ಅಯ್ಯಪ್ಪ ಭಕರು ನೀಡಿದರೆ ಮಾತ್ರವೇ ಅದು ಸೇವಿಸುತ್ತವೆ ಎಂದರು. ಈ ವರ್ಷ ಶಬರಿಮಲೆಗೆ ಹೋದರೆ 19 ವರ್ಷಗಳಾಗುತ್ತದೆ. ಈ ವರ್ಷ ನಾನು ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ತೆರಳಬೇಕು ಎಂದು ನಿರ್ಧರಿಸಿದ್ದೆ ಅದಕ್ಕೆ ಸಂಗಡಿಗರು ಕೂಡಾ ಒಪ್ಪಿ ಈ ಬಾರಿ ನಮ್ಮ ಜೊತೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು. ಇದೀಗ ಇಂದು 600 ಕಿಲೋ ಮೀಟರ್ ಕ್ರಮಿಕರಿಸಿದ್ದೇವೆ. ಇನ್ನು ಶಬರಿಮಲೆ ಗೆ 600 ಕಿಲೋ ಮೀಟರ್ ಇದ್ದು, 16 ದಿನಗಳ ಯಾತ್ರೆ ಇವೆ. ಮಂಡಲ ಪೂಜೆಯ ಸಮಯವಾದ ಡಿಸೆಂಬರ್ 2 ರಂದು ಶಬರಿಮಲೆ ತಲುಪಲು ನಿರ್ಧರಿಸಿದ್ದೇವೆ ಎಂದರು. ಇವರ ಜೊತೆಗೆ ನಾಯಿಯೂ ಹೆಜ್ಜೆಹಾಕುತ್ತಿರುವುದು ಅಯ್ಯಪ್ಪ ಭಕ್ತರಿಗೆ ಸೋಜಿಗವಾಗಿದೆ.