ಲಿವರ್ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಉಪ್ಪಳ ಐಲದ ಕುದುಪುಳು ನಿವಾಸಿ ಧನ್ಯ (19) ಚಿಕಿತ್ಸೆ ನಡುವೆ ನಿಧನ.
ಜೂನ್ 12, 2024
0
ಲಿವರ್ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಉಪ್ಪಳ ಐಲದ ಕುದುಪುಳು ನಿವಾಸಿ ಧನ್ಯ (19) ಚಿಕಿತ್ಸೆ ನಡುವೆ ನಿಧನ.
ಮಂಜೇಶ್ವರ: ಲಿವರ್ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಉಪ್ಪಳ ಐಲದ ಕುದುಪುಳು ನಿವಾಸಿ ಧನ್ಯ (19) ಸಾವಿರಾರು ಮಂದಿಯ ಪ್ರಾರ್ಥನೆಯ ನಡುವೆ ಇಂದು ಸಂಜೆ ಇಹಲೋಕ ತ್ಯಜಿಸಿದ್ದಾಳೆ.
ಉಪ್ಪಳ ಬಳಿಯ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿಯ ಕುದುಪುಳು ನಿವಾಸಿಯೂ, ನಯಾಬಜಾರ್ ನಲ್ಲಿ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಸುರೇಶ್ - ಹರಿಣಾಕ್ಷಿ ದಂಪತಿ ಪುತ್ರಿಯಾಗಿರುವ ಧನ್ಯ ಮಂಗಳೂರಿನ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಹಲವು ದಿನಗಳಿಂದ ಲಿವರ್ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದಳು. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಲಿವರ್ ನಿಷ್ಕ್ರಿಯಗೊಂಡಿತ್ತು. ಕೂಡಲೆ ಬದಲಾವಣೆ ಮಾಡಲು ವೈದ್ಯರು ಸೂಚಿಸಿದ ಹಿನ್ನಲೆಯಲ್ಲಿ ಮನೆಯ ಓರ್ವ ಸದಸ್ಯ ಲಿವರ್ ನೀಡಲು ಮುಂದಾಗಿದ್ದರು. ಈ ಬದಲಾವಣೆಯ ಚಿಕಿತ್ಸೆಗಾಗಿ ಈ ತಿಂಗಳ 8 ರಂದು ರಾತ್ರಿ 8 ಗಂಟೆ ವೇಳೆ ಧನ್ಯಳನ್ನು ಆಂಬುಲೆನ್ಸ್ ಮೂಲಕ ಜೀರೋ ಟ್ರಾಪಿಕ್ ನಲ್ಲಿ ಕೆಲವೇ ಗಂಟೆಗಳಲ್ಲಿ ಕೊಚ್ಚಿಯ ಅಮೃತ ಆಸ್ಪತ್ರೆಗೆ ದಾಖಲಿಸಿದರೂ, ಅಲ್ಲಿ ಪರೀಕ್ಷಿಸಿದ ವೈದ್ಯರು ಧನ್ಯ ಕೋಮಾವಸ್ತೆಯಲ್ಲಿದ್ದ ಕಾರಣ ಚಿಕಿತ್ಸೆ ಪ್ರಕ್ರಿಯೆ ನಡೆಸಲು ಅಸಾಧ್ಯವೆಂದರು. ಬಳಿಕ ಮುಂದಿನ ಚಿಕಿತ್ಸೆಗಾಗಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೊಳಪಡಿಸಲಾಗಿತ್ತು, ಇಂದು ಸಂಜೆ ಇಹಲೋಕ ತ್ಯಜಿಸಿದ್ದಾಳೆ. ಮೃತದೇಹವನ್ನು ಇದೀಗ ಮರಣೋತ್ತರ ಪರೀಕ್ಷೆಗೊಳಪಡಿಸಿ, ನಾಳೆ ಬೆಳಗ್ಗೆ ಮನೆಗೆ ತರಲಾಗುವುದು. ಬಳಿಕ ಅಂತ್ಯಕ್ರಿಯೆಯ ವಿಧಿ ವಿಧಾನ ನಡೆಯಲಿದೆ. ಮೃತಪಟ್ಟ ಧನ್ಯ ಮಂಗಳೂರಿನ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಓದಿನಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯಳಾಗಿದ್ದಳು. ಧನ್ಯಳ ಅಗಲುವಿಕೆ ಇದೀಗ ಅವಳ ಸಹಪಾಠಿಗಳಲ್ಲಿ ಹಾಗೂ ಮನೆ ಮಂದಿ, ಸ್ನೇಹಿತ ವರ್ಗದಲ್ಲಿ ಶೋಕವನ್ನುಂಟುಮಾಡಿದೆ. ಧನ್ಯಳ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಹೃದಯಿಗಳಲ್ಲಿ ನೆರವನ್ನು ಯಾಚಿಸಿ, ಸಂಗ್ರಹಿಸಿ, ಮನೆಯವರಿಗೆ ನೀಡಲಾಗಿತ್ತು.