ಕನ್ನಡ ಸಂಘ ಕೊಚ್ಚಿನ್ ,ಹಿರಿಯ ಉಪಾಧ್ಯಕ್ಷರಾಗಿ ಡಾ, ಮಲ್ಲಿಕಾರ್ಜುನ ಎಸ್. ನಾಸಿ ಆಯ್ಕೆ.
ಸೆಪ್ಟೆಂಬರ್ 26, 2024
0
ಕನ್ನಡ ಸಂಘ ಕೊಚ್ಚಿನ್ ,ಹಿರಿಯ ಉಪಾಧ್ಯಕ್ಷರಾಗಿ ಡಾ, ಮಲ್ಲಿಕಾರ್ಜುನ ಎಸ್. ನಾಸಿ ಆಯ್ಕೆ.
ಮಂಜೇಶ್ವರ: ಕೇರಳದ ಹಿರಿಯ ಕನ್ನಡಪರ ಸಂಸ್ಥೆಯಾದ ಕನ್ನಡ ಸಂಘ ಕೊಚ್ಚಿನ್ ಇದರ ಹಿರಿಯ ಉಪಾಧ್ಯಕ್ಷರಾಗಿ ಹಿರಿಯ ವೈದ್ಯ, ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ. ಮಲ್ಲಿಕಾರ್ಜುನ ಎಸ್ ನಾಸಿ ಆಯ್ಕೆಯಾಗಿದ್ದಾರೆ. ಮೂಲತಃ ಕಲಬುರ್ಗಿ ಜಿಲ್ಲೆಯವರಾದ ನಾಸಿಯವರು ಇಲ್ಲಿನ ಎಸ್. ಬಿ. ಆರ್. ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಎಂ. ಆರ್. ಮೆಡಿಕಲ್ ಕಾಲೇಜಿನಲ್ಲಿ ಎಂ. ಬಿ. ಬಿ. ಎಸ್ ಪೂರೈಸಿ 2004 ರಲ್ಲಿ ಕೇರಳದ ಕೊಚ್ಚಿನ್ ಗೆ ಆಗಮಿಸಿದರು. 2016 ರಲ್ಲಿ ಪೋತನಿಕ್ಕಾಡ್ ನಲ್ಲಿ ಸೈನ್ಟ್ ಮೇರಿಸ್ ಎಂಬ ಆಸ್ಪತ್ರೆಯನ್ನು ತೆರೆದು ಇಲ್ಲಿ ಜನಾನುರಾಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪ್ರದೇಶದಲ್ಲಿರುವ ಕನ್ನಡ ಭಾಷಿಗರನ್ನು ಒಗ್ಗೂಡಿಸಿ ಅವರಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಕಲೆಗಳನ್ನು ಬೆಳೆಸಲು ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ, ಕನ್ನಡ ಮತ್ತು ಮಳಯಾಲ ಭಾಷಾ ಸೌಹಾರ್ದತೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಇವರ ಕನ್ನಡಪರ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು 2022 ರ ಜುಲೈ ತಿಂಗಳಲ್ಲಿ ಮುಂಬೈನಲ್ಲಿ ನಡೆದ ಹೊರನಾಡ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ "ಶ್ರೇಷ್ಠ ಹೊರನಾಡ ಕನ್ನಡಿಗ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕೇರಳದ ಅನೇಕ ಸಂಘ ಸಂಸ್ಥೆಗಳು ಇವರ ಜನಪರ ಸೇವೆಯನ್ನು ಗುರುತಿಸಿ ಗೌರವಿಸಿದೆ. ಇವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್ ಸುಬ್ಬಯಕಟ್ಟೆ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಎನ್. ಚನಿಯಪ್ಪ ನಾಯ್ಕ್ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.