ಕಾಸರಗೋಡು ಜಿಲ್ಲಾ ಯೋಗ ಉತ್ಸವ 2025 - ನಾಳೆಯಿಂದ ನೀರ್ಚಾಲ್ ನಲ್ಲಿ.
ಮೇ 22, 2025
0
ಕಾಸರಗೋಡು ಜಿಲ್ಲಾ ಯೋಗ ಉತ್ಸವ 2025 - ನಾಳೆಯಿಂದ ನೀರ್ಚಾಲಲ್ಲಿ.
ಕುಂಬಳೆ: ಕೇಂದ್ರ ಸರ್ಕಾರದ ಯುವಜನ ಕ್ಷೇಮ ಮತ್ತು ಕ್ರೀಡಾ ಮಂತ್ರಾಲಯದ ಅಂಗೀಕಾರ ಇರುವ ‘ಯೋಗಾಸ ನ ಭಾರತ’ ಇದರ ಕೇರಳ ರಾಜ್ಯ ಘಟಕವಾದ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಕೇರಳದ ಜಿಲ್ಲಾ ಘಟಕವಾದ ‘ಯೋಗಾಸನ ಕಾಸರಗೋಡು’ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಯೋಗ ಉತ್ಸವ 2025 ಎಂಬ ವಿನೂತನ ಕಾರ್ಯಕ್ರಮವನ್ನು ಮೇ.24 ಮತ್ತು 25 ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಆವರಣದಲ್ಲಿ ವ್ಯೆವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ.24 ರಂದು ಸಂಜೆ 4ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು.ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ ಪ್ಯೆಲೂರು ಉದ್ಘಾಟಿಸುವರು. ತಲಪಾಡಿ ಶ್ರೀಶಾರದಾ ವ್ಯೆದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಡಾ.ಸಂದೀಪ್ ಬೇಕಲ್. ಆರ್., ಉದ್ಯಮಿ ನಿತ್ಯಾನಂದ ಶೆಣ್ಯೆ ಬದಿಯಡ್ಕ ಮುಖ್ಯ ಅತಿಥಿಗಳಾಗಿರುವರು. ಗ್ರಾ.ಪಂ.ಉಪಾಧ್ಯಕ್ಷ ಎಂ.ಅಬ್ಬಾಸ್, ಬ್ಲಾ.ಪಂ.ಸದಸ್ಯರಾದ ಸುಕುಮಾರ ಕುದ್ರೆಪ್ಪಾಡಿ, ಜಯಂತಿ, ಗ್ರಾ.ಪಂ.ಸದಸ್ಯೆ ಜಯಶ್ರೀ.ಪಿ. ಶುಭಹಾರಯಿಸುವರು. ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ್, ಯೋಗಾಸನ ಕೇರಳ ರಾಜ್ಯ ಕಾರ್ಯದರ್ಶಿ ಶಾಮಿಲ್ ಮೋನ್ ಉಪಸ್ಥಿತರಿರುವರು.
ಮೇ.25 ರಂದು ಸಂಜೆ 4 ಕ್ಕೆ ಜರಗುವ ಸಮಾರೋಪ ಸಮಾರಂಭವನ್ನು ಮೇಕ್ಸಿಕೊದ ಯೋಗ ರಾಯಭಾರಿ ಯೋಗಾಚಾರ್ಯ ವಿಜಯ ಗಣೇಶ್ ಬದಿಯಡ್ಕ ಉದ್ಘಾಟಿಸುವರು. ಯೋಗಾಸನ ಕಾಸರಗೋಡು ಜಿಲ್ಲಾಧ್ಯಕ್ಷ ರವಿಶಂಕರ ನೆಗಲಗುಳಿ ಅಧ್ಯಕ್ಷತೆ ವಹಿಸುವರು. ಬ್ಲಾ.ಪಂ.ಸದಸ್ಯೆ ಅಶ್ವಿನಿ ಎಂ.ಎಲ್., ಯೋಗಾಸನ ಕೇರಳದ ಕಾರ್ಯದರ್ಶಿ ಶಮಿಲ್ ಮೋನ್, ದೇಲಂಪಾಡಿ ಯೋಗ ಪ್ರತಿಷ್ಠಾಬದ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿರುವರು. ಬ್ಲಾ.ಪಂ.ಸದಸ್ಯೆ ಅಶ್ವಿನಿ ಮೊಳೆಯಾರ, ಗ್ರಾ.ಪಂ.ಸದಸ್ಯೆ ಸ್ವಪ್ನ ಕೆ.ಪಿ., ಉದ್ಯಮಿ ಹರಿಪ್ರಸಾದ್ ರ್ಯೆ ಪುತ್ರಕಳ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಶಾಲಾ ಪ್ರಭಾರ ಪ್ರಾಂಶುಪಾಲೆ ಜಯಲಕ್ಷ್ಮಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ವ್ಯೆ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಯೋಗಾಸನ ಕಾಸರಗೋಡು ಅಧ್ಯಕ್ಷ ರವಿಶಂಕರ ನೆಗಲಗುಳಿ, ಕಾರ್ಯದರ್ಶಿ ತೇಜಕುಮಾರಿ ಕಾಸರಗೋಡು, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಗಣೇಶ್, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಜಿಲ್ಲಾ ಸದಸ್ಯ ವಿನಯಪಾಲ್, ಪ್ರತಿಭಾ ಕಾಸರಗೋಡು, ಶಾಲಾ ಪಿಟಿಎ ಅಧ್ಯಕ್ಷ ಸುಕುಮಾರ ಕುದ್ರೆಪ್ಪಾಡಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ಏನೇನು ಇರಲಿದೆ:
ಯೋಗ ಉತ್ಸವದಲ್ಲಿ ಯೋಗ ಪಟುಗಳಿಗೆ ಯೋಗಾಸನಗಳ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಚಿತ್ರರಚನ ಸ್ಪರ್ಧೆ ಹಾಗೂ ಯೋಗ ತರಬೇತಿ ನಡೆಯಲಿದೆ. ಇದಲ್ಲದೆ ಆಹಾರಮೇಳ, ಹಳೆಯ ಕಾಲದ ವಸ್ತುಗಳ ಪ್ರದರ್ಶನ, ಯೋಗ ನೃತ್ಯ ಪ್ರದರ್ಶನ ಹಾಗೂ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಇವರ ಸಹಯೋಗದೊಂದಿಗೆ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ನಡೆಯಲಿದೆ. 24 ಮತ್ತು 25 ಮೇ 2025 ರಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಉತ್ಸವ ನಡೆಯಲಿದೆ.
ವಿಶೇಷ ಆಕರ್ಷಣೆ
ಆಹಾರ ಮೇಳ.
ಯೋಗ ಉತ್ಸವದ ಅಂಗವಾಗಿ ವಿವಿಧ ಪ್ರದೇಶಗಳಿಂದ ಆಗಮಿಸುವ ಪಾಕ ತಜ್ಞರಿಂದ ತಯಾರಿಸಲ್ಪಟ್ಟ ಖಾದ್ಯಗಳು ಆಹಾರ ಮೇಳದಲ್ಲಿ ಲಭಿಸಲಿದೆ. ಸಾವಯವ ಕೃಷಿ ಸ್ಥಳಗಳಲ್ಲಿ ಬೆಳೆದ ಆಯ್ದ ತರಕಾರಿಗಳನ್ನು ಉಪಯೋಗಿಸಿ ಈ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಶುಚಿ ರುಚಿಯಾದ ಬಗೆ ಬಗೆಯ ಖಾದ್ಯಗಳನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ .
ಮಕ್ಕಳ ಕ್ರೀಡಾ ಜಗತ್ತು.
ಮಗುವಿನ ಅರಿವಿನ ಬೆಳವಣಿಗೆಗೆ ಆಟವು ಮುಖ್ಯವಾಗಿದೆ. ಆಟದ ಮೂಲಕ ನಿಮ್ಮ ಮಗುವಿನ ಯೋಚಿಸುವ, ಅರ್ಥಮಾಡಿಕೊಳ್ಳುವ, ಸಂವಹನ ನಡೆಸುವ, ನೆನಪಿಟ್ಟುಕೊಳ್ಳುವ, ಊಹಿಸುವ ಮತ್ತು ಮುಂದೆ ಏನಾಗಬಹುದು ಎಂಬುದನ್ನು ಊಹಿಸುವ ಸಾಮರ್ಥ್ಯ ಬೆಳೆಯುತ್ತದೆ. ನಿಮ್ಮ ಮಗುವಿನೊಂದಿಗೆ ಆಟವಾಡಲು ಸಮಯ ಕಂಡುಕೊಳ್ಳುವುದು ಮಗುವಿನ ಅರಿವಿನ ಬೆಳವಣಿಗೆಗೆ ಒಳ್ಳೆಯದು. ಗಣಿತ ಹಾಗೂ ವಿಜ್ಞಾನದ ಆಟಗಳು ಯೋಗ ಉತ್ಸವವದ ಭಾಗವಾಗಿದೆ.
ವಸ್ತು ಪ್ರದರ್ಶನ
ಆಧುನಿಕ ಜೀವನ ಶೈಲಿಯಿಂದಾಗಿ ಗುಜರಿ ಅಂಗಡಿ ಸೇರುತ್ತಿರುವ ಪುರಾತನ ಗೃಹೋಪಯೋಗಿ ಮತ್ತು ಕೃಷಿ ಪರಿಕರಗಳನ್ನು ಈ ಯೋಗ ಉತ್ಸವದಲ್ಲಿ ಪ್ರದರ್ಶಿಸಲಾಗುವುದು. ಮರದ ತೊಟ್ಟಿಲು, ಧಾನ್ಯ ಅಳೆಯಲು ಬಳಸುತ್ತಿದ್ದ ಪಾತ್ರೆಗಳು, ತಾಂಬೂಲ ಡಬ್ಬಿ, ಪುರಾತನ ಪ್ರಸಾಧನ ಸಾಮಗ್ರಿಗಳು, ಹಳೆಯ ಕಾಲದ ಪಾತ್ರೆಗಳು,ರುಬ್ಬು ಕಲ್ಲು, ಮಣ್ಣಿನ ಮಡಿಕೆಗಳು, ಅಡಕಲ್ಲು, ಕತ್ತಿ ಗುರಾಣಿಗಳು, ಕೃಷಿ ಪರಿಕರಗಳು ಈ ವಸ್ತು ಪ್ರದರ್ಶನದಲ್ಲಿ ಇವೆ. ಇಂತಹ ಅಪರೂಪದ ಹಳೆಯ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಯತ್ನವೇ ಈ ಹಳೆಯ ಕಾಲದ ವಸ್ತುಗಳ ಪ್ರದರ್ಶನ.
ಆಧ್ಯಾತ್ಮಿಕ ಚಿತ್ರ ಪ್ರದರ್ಶನ- ಮತ್ತು ಮಾರಾಟ.
ಆಧ್ಯಾತ್ಮ ಎನ್ನುವುದು ಭಾರತದ ಸಂಸ್ಕೃತಿಯ ಜೀವಾಳ. ಯೋಗ ಉತ್ಸವದ ಅಂಗವಾಗಿ ಭಾರತೀಯರ ನರನಾಡಿಗಳಲ್ಲಿರುವ ಆಧ್ಯಾತ್ಮಿಕ ವಿಚಾರಗಳಿಗೆ ಪೂರಕವಾಗುವ ರೀತಿಯಲ್ಲಿ ವಿವಿಧ ಚಿತ್ರಗಾರರ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಯೋಗ ನೃತ್ಯ ಪ್ರದರ್ಶನ
ಯೋಗ ಈಗ ಕೇವಲ ಆರೋಗ್ಯ ಪದ್ಧತಿಯಾಗಿ ಉಳಿದಿಲ್ಲ. ಒಲಿಂಪಿಕ್ ಕೌನ್ಸಿಲ್ ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಅನುಮೋದಿಸಿದೆ. *‘ಯೋಗಾಸನ ಭಾರತ’* ಯೋಗಾಸನ ಸ್ಪರ್ಧೆಗಿರುವ ನಿಯಮಾವಳಿಗಳನ್ನು ತಯಾರಿಸಿದೆ. ಇದು ಭಾರತ ಸರಕಾರದ ಯುವಜನ ಕ್ಷೇಮ ಮತ್ತು ಕ್ರೀಡಾ ಮಂತ್ರಾಲಯದ ಅಂಗೀಕಾರವನ್ನು ಪಡೆದಿದೆ. ಯೋಗಾಸನ ಸ್ಪರ್ಧೆಯ ಒಂದು ವಿಭಾಗವಾದ ‘ಆರ್ಟಿಸ್ಟಿಕ್ಟ್ ಗ್ರೂಪ್’ ಎಂಬ ಯೋಗಾಸನ, ನೃತ್ಯ ಮತ್ತು ಸಂಗೀತದ ಅಪೂರ್ವ ಮಿಲನವಾದ ಯೋಗ ನೃತ್ಯವನ್ನು ಯೋಗೋತ್ಸವದ ಅಂಗವಾಗಿ ಯೋಗ ಫೋರ್ ಕಿಡ್ಸ್ ಸಂಸ್ಥೆಯ ಮಕ್ಕಳು ಪ್ರದರ್ಶಿಸುವರು.
ಯೋಗದಲ್ಲಿ ಉನ್ನತ ಶಿಕ್ಷಣ
ಯೋಗದಲ್ಲಿ ಉನ್ನತ ವ್ಯಾಸಂಗ ಮಾಡಿ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕ ಸೇರಿದಂತೆ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬಹುದು. ವಿಶ್ವವಿದ್ಯಾನಿಲಯಗಳಲ್ಲಿ ಬಿಎಸ್ಸಿ , ಎಂಎಸ್ಸಿ, ಪಿ.ಎಚ್.ಡಿ ಮಾಡಲು ಅವಕಾಶವಿದೆ. ಯೋಗ ಉತ್ಸವದ ಅಂಗವಾಗಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಯೋಗದಲ್ಲಿ ಉನ್ನತ ಶಿಕ್ಷಣದ ಸಾಧ್ಯತೆಗಳನ್ನು ತಿಳಿಯಲು ಅವಕಾಶ ಕಲ್ಪಿಸಲಾಗಿದೆ.
*ಮಾರಾಟ ಮಳಿಗೆಗಳು*
ಯೋಗ ಉತ್ಸವದ ಅಂಗವಾಗಿ ಆರೋಗ್ಯ ಹಾಗೂ ಸೌಂದರ್ಯವರ್ಧಕಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಸಜ್ಜೀಕರಿಸಲಾಗಿದೆ.