ತುಳುನಾಡಿನ ದ್ರಾವಿಡ ಪರಂಪರೆಯ ಮೂಲ ನಿಯಮದಂತೆ ಇರುವೈಲ್ ಮೂಡಯಿಬೆಟ್ಟು ಬಿಲ್ಲವ ಸಮುದಾಯದ ಬಂಗೇರ ಕುಟುಂಬಸ್ಥರ ದೈವಗಳ ತರವಾಡು ಮನೆ " ಸಿರಿಮುಡಿಯ "ಗೃಹಪ್ರವೇಶ
ಮೇ 14, 2025
0
ತುಳುನಾಡಿನ ದ್ರಾವಿಡ ಪರಂಪರೆಯ ಮೂಲ ನಿಯಮದಂತೆ
ಇರುವೈಲ್ ಮೂಡಯಿಬೆಟ್ಟು ಬಿಲ್ಲವ ಸಮುದಾಯದ ಬಂಗೇರ
ಕುಟುಂಬಸ್ಥರ ದೈವಗಳ ತರವಾಡು ಮನೆ " ಸಿರಿಮುಡಿಯ "ಗೃಹಪ್ರವೇಶ.
ಮಂಗಳೂರು: ಅನಾವಶ್ಯಕ ಖರ್ಚುಗಳಿಲ್ಲದೇ ಆಡಂಭರ ರಹಿತ ಸರಳ ಆರಾಧನೆಯೊಂದಿಗೆ, ಪ್ರಾಕೃತಿಕ ವಸ್ತುಗಳನ್ನೇ ಬಳಸಿ ದೈವಾರಾಧನೆಯ ಮೂಲ ನಿಯಮದಂತೆ ಇರುವೈಲು ಮೂಡಾಯಿಬೆಟ್ಟು ಬಂಗೇರ ಕುಟುಂಬಿಕರ ತರವಾಡು ಮನೆ `ಸಿರಿಮುಡಿ' ಗೃಹಪ್ರವೇಶ ಅರ್ಥಪೂರ್ಣವಾಗಿ ಜರಗಿತು.
ಬಂಗೇರ ಕುಟುಂಬಸ್ಥರ ತರವಾಡು ಮನೆ ಗತ ಕಾಲದ ವೈಭವದಂತೆ ವಾಸ್ತುಪ್ರಕಾರ ಆಯಬದ್ಧವಾಗಿ ನಿರ್ಮಾಣಗೊಂಡು ಮನೆಯ ಗೃಹಪ್ರವೇಶ ಅವೈದಿಕವಾಗಿ ನಡೆಯಿತು. ದೈವಗಳ ಚಾವಡಿ ಪ್ರವೇಶ, ದಾಸಯ್ಯರಿಂದ ಮುಡಿಪು, ಪ್ರೇತರಾಧನೆ ಇತ್ಯಾದಿ ಕುಟುಂಬ ಸಂಬಂಧಿತ ಕಾರ್ಯಕ್ರಮಗಳೆಲ್ಲವೂ ಪೂರ್ವನಿಯಮದ ಮೂಲ ಪದ್ದತಿಯಂತೆ ಜರಗಿತು. ಮುಂದಿನ ಪೀಳಿಗೆಗೆ ದೈವಾರಾಧನೆ ಮತ್ತು ಕುಟುಂಬ ಸಂಬಂಧಿತ ಆರಾಧನಾ ನಿಯಮಗಳ ಅನುಭವ ನೀಡುವ ಉದ್ದೇಶದಿಂದ ಮೂಲ ನಿಯಮಕ್ಕೆ ಒತ್ತು ನೀಡಲಾಯಿತು. ವಾಸ್ತು ಆರಾಧನೆ, ವಿಶ್ವಕರ್ಮ ಪೂಜೆ, ಹಾಲುಕ್ಕಿಸುವುದು, ಧರ್ಮ ದೈವ, ಕುಟುಂಬ ದೈವಗಳ ಹೊಸ ತರವಾಡು ಮನೆ ಪ್ರವೇಶ. ರಾತ್ರಿಯ ಅಗೆಲು ತಂಬಿಲ ಇತ್ಯಾದಿ ನಿಯಮಗಳೆಲ್ಲವೂ ಮೂಲ ನಿಯಮದಂತೆ ಕುಟುಂಬದ ಯಜಮಾನನ ಕೈಯಲ್ಲೇ ನಡೆಸಲಾಯಿತು. ಈ ಯಶಸ್ವಿ ಕಾರ್ಯಕ್ರಮದ ಹಿಂದೆ ಮುಂಬೈನ ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಟ್( ಸಿ.ಎ) ಆಗಿರುವ ಸುಂದರ ಪೂಜಾರಿಯವರ ಶ್ರಮ ಬಹಳಷ್ಟಿತ್ತು. ಬಂಗೇರ ಕುಟುಂಬದ ಸದಸ್ಯರು ಹಾಗೂ ಅಪಾರ ದೈವ ಭಕ್ತಿಯ ಸಜ್ಜನ ವ್ಯಕ್ತಿ. ಇವರು ಈ ಹಿಂದೆ ಮುಂಬೈ ಸಾಯನ್ ನಲ್ಲಿ ಸುರೇಶ್ ಶೆಟ್ಟಿ ಯೆಯ್ಯಾಡಿ ಮತ್ತು ಅವರ ತಂಡದವರು ಹಮ್ಮಿಕೊಂಡ ದೈವಾರಾಧನಾ ಸಂವಾದ ಕಾರ್ಯಕ್ರಮದಲ್ಲಿ ತುಳುನಾಡಿನ ದೈವರಾಧನೆ ಮತ್ತು ಸಂಸ್ಕೃತಿಕ ವಿಮರ್ಶಕ ತಮ್ಮಣ್ಣ ಶೆಟ್ಟಿ ಅವರ ಮಾತುಗಳಿಂದ ಪ್ರೇರಣೆಗೊಂಡು ತನ್ನ ಕುಟುಂಬದ ದೈವ ಆರಾಧನೆ ಮತ್ತು ತರವಾಡು ಮನೆಯು ಹಿರಿಯರಿಂದ ಬಂದ ಮೂಲ ಪದ್ಧತಿಯಲ್ಲೇ ಆಗಬೇಕು ಅನ್ನುವ ಪ್ರತಿಜ್ಞೆಯೊಂದಿಗೆ ಸುಂದರ ಪೂಜಾರಿಯವರು ತಮ್ಮಣ್ಣ ಶೆಟ್ಟಿಯವರನ್ನು ನೇರ ಭೇಟಿಯಾಗಿ ಈ ವಿಚಾರದಲ್ಲಿ ಮಾತುಕತೆ ನಡೆಸಿ, ಕುಟುಂಬಿಕರೊಂದಿಗೆ ಚರ್ಚಿಸಿ ಮನೆ ನಿರ್ಮಾಣದಿಂದ ಹಿಡಿದು ದೈವಗಳ ಅಗೆಲು ತಂಬಿಲ ಸೇವೆಯವರೆಗಿನ ಎಲ್ಲಾ ಕಾರ್ಯಕ್ರಮಗಳನ್ನು ಮೂಲಪದ್ಧತಿಗಳಂತೆ ನೆರವೇರಿಸಿ ಕೊಡಬೇಕೆಂದು ವಿನಂತಿಸಿದರು. ಆ ಪ್ರಕಾರ ತಮ್ಮಣ್ಣ ಶೆಟ್ಟಿಯವರು ಇದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ತಾ. 6/5/2025 ರಂದು ಸಿರಿಮುಡಿ ದೈವರ್ಪಣೆ ನಡೆಸಲಾಯಿತು. ತಮ್ಮಣ್ಣ ಶೆಟ್ಟಿ ಅವರು ಹೇಳುವಂತೆ ದೈವರಾಧನೆಯಲ್ಲಿ ಜ್ಯೋತಿಷ್ಯ, ಪ್ರಾಯಶ್ಚಿತ, ಪ್ರೇತೋಚ್ಛಾಟ್ಟನೆ, ಅಘೋರ ಹೋಮ, ಪರಿಹಾರ, ನಿವೃತಿ ಉತ್ತರ ದಕ್ಷಿಣ ಸುತ್ತುವಿಕೆ ಅನಗತ್ಯ ಖರ್ಚುಗಳನ್ನು ನಡೆಸದೇ ಗ್ರಾಮ ದೈವ ದೇವರಿಗೆ ಪ್ರಾರ್ಥಿಸಿ ಹಿರಿಯರನ್ನು ನೆನೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಶ್ವಕರ್ಮರಿಂದ ಕುಟ್ಟಿ ಹಾಕಿಸಿ , ಮನೆ ನಿರ್ಮಾಣದ ಕಾಮಗಾರಿ ನಡೆಸಲಾಗಿತ್ತು. ಕುಟುಂಬದ ಹಿರಿಯರು ಯಜಮಾನರಾದ ನಾರಾಯಣ ಪೂಜಾರಿಯವರ ಕೈಯಲ್ಲೇ ದೈವರಾಧನೆಗೆ ಸಂಬಂಧಿಸಿದ ಎಲ್ಲಾ ವಿಧಿ ವಿಧಾನಗಳನ್ನು ಮಾಡಿಸಿ ದೈವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಬಂಧುಗಳು ಹಿತೈಷಿಗಳು ಹಾಗೂ ಇರುವೈಲು ಗ್ರಾಮದ ದೈವ ಭಕ್ತರು ನಿರೀಕ್ಷೆಗೂ ಮೀರಿ ಗೃಹಪ್ರವೇಶದಲ್ಲಿ ಭಾಗವಹಿಸಿ ಮೂಲನಿಯಮದ ಆರಾಧನೆಯನ್ನು ಕಣ್ತುಂಬಿಕೊಂಡರು. ಇದು ಸುಂದರ್ ಪೂಜಾರಿಯವರ ಕುಟುಂಬಕ್ಕೂ ಅತೀವ ಸಂತೋಷವನ್ನು ನೀಡಿದೆ. ವಂಶವೃಕ್ಷ ಹೆಸರಿನ ಸ್ಮರಣಿಕೆ ಕುಟುಂಬಿಕರ ಮನದಲ್ಲಿ ಅಚ್ಚಳಿಯದೆ ಉಳಿದಂತಿತ್ತು. ಅದರಲ್ಲಿ ಗ್ರಾಮ ಕುಟುಂಬ ದೈವಗಳ ವಿವರ, ನಡವಳಿ ಹಾಗೂ ಹಿಂದಿನ ತಲೆಮಾರಿನ ಹಿರಿಯರ ಹೆಸರು. ಪ್ರಸ್ತುತ ಇರುವ ಹಿರಿಯರ ಹೆಸರು. ತರವಾಡು ಮನೆಯ ಉದ್ದೇಶ, ಇತ್ಯಾದಿ ವಿಚಾರಗಳು ಅನುಭವ ಗ್ರಂಥದಂತಿತ್ತು. ದೈವಗಳ ಉಯ್ಯಾಲೆಗೆ ಕಂಚು ಇತ್ತಾಳೆಯ ಸರಪಳಿ, ದೈವಗಳ ಹೆಸರಿನ ತಾಮ್ರದ ಮಾಲೆ, ಮರದ ಸಂಪ್ರದಾಯಿಕ ಕುರ್ಚಿಗಳು, ಮಣ್ಣಿನ ಪಾತ್ರ, ಬೂರಿನ ಬುಟ್ಟಿ, ರಾಶಿ ರಾಶಿ ಕೇಪುಲ ಹೂವು, ಸಾಲು ಸಾಲು ಮಣ್ಣಿನ ಹಣತೆಯ ದೀಪಗಳು, ತೆಂಗಿನ ಗರಿಯ ಚಪ್ಪರ, ಬಾಳೆ ಎಲೆ ಊಟ, ಎಲ್ಲವೂ ದೈವ ಪ್ರಿಯವಾದಂತೆ ನೆರವೇರಿಸಿ ಶಾಶ್ವತವಾಗಿ ಜನರ ನೆನಪಿನಲ್ಲಿ ಉಳಿಯುವಂತಿತ್ತು. ಒಟ್ಟಾರೆಯಾಗಿ ಇಡೀ ಕಾರ್ಯಕ್ರಮ ದೈವರಾಧನೆಯ ಮೂಲ ನಿಯಮಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಅರ್ಥ ಪೂರ್ಣವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಂಗೇರ ಕುಟುಂಬಸ್ಥರು ಬಿಲ್ಲವರು ಆಗಿರುವುದರಿಂದ ಮೂರ್ತೆಗಾರಿಕೆಯ ಪರಿಕರಗಳನ್ನು ಪರಿಚಯದ ದೃಷ್ಠಿಯಿಂದಲೂ ಕಾರ್ಯಕ್ರಮದಲ್ಲಿ ಇಡಲಾಗಿತ್ತು.
ಒಟ್ಟಿನಲ್ಲಿ ಬಂಗೇರ ತರವಾಡು ಮನೆ `ಸಿರಿಮುಡಿ' ಚಾವಡಿಯಿಂದ ಮುಂದಿನ ತಲೆಮಾರಿಗೆ ಅದ್ಬುತ ಸಂದೇಶ ರವಾನೆ ಸೂರ್ಯ ಚಂದ್ರ ಇದ್ದಷ್ಟೂ ಸತ್ಯ ಅನ್ನುವ ಅಭಿಪ್ರಾಯ ಕುಟುಂಬದ ಹಿರಿಯರದ್ದಾಗಿತ್ತು.