ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಮಂಗಳೂರಿನ ಯುವ ನಾಯಕ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆ.
ಡಿಸೆಂಬರ್ 24, 2023
0
ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಮಂಗಳೂರಿನ ಯುವ ನಾಯಕ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆ.
ಮಂಗಳೂರು: ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ನಾಯಕ
ಕ್ಯಾಪ್ಟನ್ ಬೃಜೇಶ್ ಚೌಟ ಅವರು ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ
ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಬೃಜೇಶ್ ಚೌಟರು ಕಾಲೇಜು ದಿನಗಳಲ್ಲಿಯೇ ಎನ್ ಸಿಸಿಯಲ್ಲಿ ಹೆಸರು
ಮಾಡಿ ಸೇನೆಗೆ ಸೇರ್ಪಡೆಯಾಗಿದ್ದರು. ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ,
ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್ಸಿ ಪದವಿ ಪೂರೈಸಿದ್ದ ಚೌಟ ಬಳಿಕ ಮಧ್ಯಪ್ರದೇಶದ
ಇಂದೋರ್ ಐಐಎಂ ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಪದವಿಯಲ್ಲಿದ್ದಾಗ ಎನ್ ಸಿಸಿಯಲ್ಲಿ ಮಂಗಳೂರು
ವಿವಿಯಲ್ಲಿ ಬೆಸ್ಟ್ ಕೇಡೆಟ್ ಎಂದು ಗುರುತಿಸಿದ್ದಲ್ಲದೆ, ದೆಹಲಿ ರಿಪಬ್ಲಿಕ್ ಪೆರೇಡ್ ನಲ್ಲಿ ಎನ್
ಸಿಸಿ ಕೇಡೆಟ್ ಆಗಿ ಪಾಲ್ಗೊಂಡಿದ್ದರು. UPSC ಆಯೋಜಿಸುವ ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್
ಎಕ್ಸಾಮಿನೇಷನ್ (CDSE) ಪರೀಕ್ಷೆ ಹಾಗೂ SSB ಇಂಟರ್ವ್ಯೂ ನಲ್ಲಿ ತೇರ್ಗಡೆಗೊಂಡು ಚೆನ್ನೈ
ಯಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ಯಲ್ಲಿ ತರಬೇತಿ ಪಡೆದು ಭಾರತೀಯ ಭೂ ಸೇನೆಯ
ಪ್ರತಿಷ್ಠಿತ 8 ಗೋರ್ಖಾ ರೈಫಲ್ಸ್ ನ 7 ನೇ ಬಾಟಲಿಯನ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
2011ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಊರಿಗೆ ಮರಳಿದ್ದ ಬೃಜೇಶ್ ಚೌಟ ಆರೆಸ್ಸೆಸ್ ಮತ್ತು
ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. 2013ರಲ್ಲಿ ಯುವಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ
ಕಾರ್ಯದರ್ಶಿಯಾಗಿದ್ದರು. 2016-19ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ
ಕಾರ್ಯದರ್ಶಿಯಾಗಿದ್ದರು. ಆನಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಕ್ಯಾಪ್ಟನ್ ಚೌಟ, ಈ
ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿದ್ದರು.
2015ರಿಂದ ಕೇರಳ, ಕರ್ನಾಟಕ, ದೆಹಲಿ, ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣಾ ಕರ್ತವ್ಯದಲ್ಲಿ
ಪಾಲ್ಗೊಂಡಿದ್ದರು. ರಾಜ್ಯ ಬಿಜೆಪಿ ಚುನಾವಣಾ ಸಮಿತಿಯ ಭಾಗವಾಗಿರುವ ಯುವ ಸಂವಾದ ಘಟಕದಲ್ಲಿ ರಾಜ್ಯ
ಸಹ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. 2015ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ
ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ಸಂಘಟಿಸಿದವರಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ
ಒಬ್ಬರು. ಕಂಬಳಕ್ಕೆ ಒಂದು ಹಂತದ ಜಯ ಸಿಕ್ಕ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ
ಆಯೋಜಿಸಬೇಕೆಂದು ನಿಶ್ಚಯಿಸಿ, ಯುವಕರನ್ನು ಕಟ್ಟಿಕೊಂಡು ಸತತ ಆರು ವರ್ಷಗಳಿಂದ ಮಂಗಳೂರು ಕಂಬಳ
ಹೆಸರಲ್ಲಿ ಕಂಬಳ ನಡೆಸುತ್ತಿದ್ದಾರೆ. ಮಂಗಳೂರು ಲಿಟ್ ಫೆಸ್ಟ್ ಆಯೋಜಕರಾಗಿ, ಸಮರ್ಥನ್ ಫೌಂಡೇಶನ್
ಟ್ರಸ್ಟಿಯಾಗಿ ಹೀಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ
ಬೃಜೇಶ್ ಚೌಟ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರಿಗೆ ಈಗ ರಾಜ್ಯ ಬಿಜೆಪಿ ಕಾರ್ಯದರ್ಶಿ
ಸ್ಥಾನಕ್ಕೆ ಭಡ್ತಿ ಸಿಕ್ಕಿದ್ದು ಸೇವಾ ಕಾರ್ಯದ ವ್ಯಾಪ್ತಿ ವಿಸ್ತರಣೆಯಾಗಿದೆ.