ಇಲ್ಲಗಳನ್ನು ಹುಡುಕದಿರಿ : ಕೃಷಿ ತಜ್ಞ ಪಿ.ಎನ್ ಭಟ್.
ಡಿಸೆಂಬರ್ 02, 2023
0
ಇಲ್ಲಗಳನ್ನು ಹುಡುಕದಿರಿ : ಕೃಷಿ ತಜ್ಞ ಪಿ.ಎನ್ ಭಟ್
ಬದಿಯಡ್ಕ: ಕೃಷಿಕರು ಇಲ್ಲಗಳನ್ನು ಹುಡುಕುವುದಕ್ಕಿಂತ ಇರುವುದಲ್ಲಿ ತೃಪ್ತರಾಗುವುದು ಉತ್ತಮ. ಇರುವ ಸಂಪನ್ಮೂಲಗಳನ್ನು ಬಳಸುತ್ತಾ ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸಿ ಕೃಷಿ ಭೂಮಿಗೆ ಪೋಷಕಾಂಶಗಳನ್ನು ನೀಡುವುದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ತಜ್ಞ ಪಿ.ಎನ್ ಭಟ್ ಹೇಳಿದರು. ಅವರು ಕುಂಬ್ದಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯ ಏತಡ್ಕ, "ಗ್ರೀನ್ ವ್ಯೂ" ಕಳೆತ್ತೋಡಿಯಲ್ಲಿ ನಡೆದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು. ಕೃಷಿಯಲ್ಲಿ ವಿಶ್ವಾಸ ಮುಖ್ಯ, ನನ್ನಿಂದಾಗದು; ಪ್ರಯೋಜನವಿಲ್ಲ ಎಂಬ ಭಾವನೆ ತೋರಿದರೆ ವಿಜಯ ಸಾಧಿಸುವುದು ಕಷ್ಟ ಎಂದು ವಿಶೇಷ ಆಹ್ವಾನಿತ ಸಾಧಕ ಕೃಷಿಕ ಸುರೇಶ್ ಬಲ್ನಾಡ್ ಹೇಳಿದರು. ಕೃಷಿಕರ ಅನುಭವ ಹಂಚಿಕೆಗಳು ಕೃಷಿಕರ ಬೆಳವಣಿಗೆಗೆ ಅತ್ಯಗತ್ಯ ಎಂದು ಸಂವಾದ ನಿರ್ದೇಶಕ ಶ್ರೀಪಡ್ರೆ ನುಡಿದರು. ಕೃಷಿಕರ ಸಮಸ್ಯೆಗಳು ಹಾಗೂ ಪೋಷಕಾಂಶಗಳ ನಿರ್ವಹಣೆಯ ಕುರಿತು ಸಭೆಯಲ್ಲಿ ಬಿರುಸಿನ ಚರ್ಚೆ ಮೂಲಕ ೫೦ ಕ್ಕೂ ಹೆಚ್ಚಿನ ಕೃಷಿಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಏತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ ವೇಣುಗೋಪಾಲ್ ಕಳೆಯತ್ತೋಡಿ ಸ್ವಾಗತಿಸಿ, ಅತ್ರೇಯಿ ಭಟ್ ಪ್ರಾರ್ಥಿಸಿ, ಕಾರ್ಯದರ್ಶಿ ಗಣರಾಜ ಕೆ ಏತಡ್ಕ ವಂದಿಸಿದರು.