ಗಡಿನಾಡಿನ ಪತ್ರಕರ್ತ ಅಜಿತ್ ಸ್ವರ್ಗ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ
ಏಪ್ರಿಲ್ 22, 2025
0
ಗಡಿನಾಡಿನ ಪತ್ರಕರ್ತ ಅಜಿತ್ ಸ್ವರ್ಗ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ
ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮೀತಿ ನೀಡುವ ದತ್ತಿನಿಧಿ ಪ್ರಶಸ್ತಿಗೆ ಗಡಿನಾಡಿನ ಪತ್ರಕರ್ತ ಅಜಿತ್ ಸ್ವರ್ಗ ಆಯ್ಕೆಯಾಗಿದ್ದಾರೆ. ಮೇ 3ರಂದು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಕೆ.ಕೆ.ಶೆಟ್ಟಿ ಕುತ್ತಿಕಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು.
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕ ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನಿಸುವರು.
ವಿಜಯ ಕರ್ನಾಟಕ ಪೆರ್ಲ, ಬೆಳ್ಳೂರು ಮತ್ತು ಕರ್ನಾಟಕದ ಪುತ್ತೂರು ತಾಲೂಕು ಪಾಣಾಜೆ ಗ್ರಾಪಂ ವ್ಯಾಪ್ತಿಯ ವರದಿಗಾರರಾದ ಅಜಿತ್ ಜನಪರ ಕಾಳಜಿಯ ವರದಿಗಾರಿಕೆ ಮೂಲಕ ಗಡಿ ನಾಡಿನ ಧ್ವನಿಯಾಗಿದ್ದಾರೆ. ಕೇರಳ ರಾಜ್ಯ ಮಟ್ಟದ ಸುದ್ದಿಗಳನ್ನು ವರದಿಮಾಡಿ ಕನ್ನಡಿಗರಿಗೆ ತಲುಪಿಸಿದ್ದಾರೆ. ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಪಾಣಾಜೆ ಒಡ್ಯ ಶಾಲಾ ಪರಿಸರದಲ್ಲಿ ನಡೆದ 6ನೇ ಕರ್ನಾಟಕ ಗಡಿನಾಡ ಮಹಾ ಸಮ್ಮೇಳನ -2023ರಲ್ಲಿ ಗಡಿನಾಡ ಧ್ವನಿ 'ಸಮಾಜ ಸೇವಾ ಭೂಷಣ' ಪ್ರಶಸ್ತಿಗೆ ಆಯ್ಕೆಯಾಗಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮೀತಿ ನೀಡುವ ದತ್ತಿನಿಧಿ ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ತಿಳಿಸಿದ್ದಾರೆ.