ತುಳಸಿ ಪೂಜೆಯ ಮಹತ್ವ.
ನವೆಂಬರ್ 24, 2023
0
ತುಳಸಿ ಪೂಜೆಯ ಮಹತ್ವ.
ಇಂದು ಎಲ್ಲೆಡೆ ತುಳಸಿ ಪೂಜೆಯ ಸಂಭ್ರಮ. ದೀಪಾವಳಿ ಕಳೆದು 14 ದಿವಸಗಳೊಳಗೆ ತುಳಸಿ ಪೂಜೆಯನ್ನು ಮಾಡುವ ಸಂಪ್ರದಾಯವನ್ನು ಈ ಪರಶುರಾಮ ಸೃಷ್ಟಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ತುಳಸಿ ಪೂಜೆಯನ್ನು ಆಚರಿಸುವವರು ತಮ್ಮ ಮನೆಯಲ್ಲಿರುವ ತುಳಸಿ ಕಟ್ಟೆಯನ್ನು ಶುಚಿಗೊಳಿಸಿ, ಬಣ್ಣ ಬಳಿದು, ರಂಗೋಲಿಯನ್ನು ಹಾಕುತ್ತಾರೆ. ತಳಿರು ತೋರಣಗಳಿಂದ ಶೃಂಗಾರಗೊಳಿಸಲು ತುಳಸಿ ಕಟ್ಟೆಯ 4 ಮೂಲೆಗಳಿಗೆ ಎಲೆಗಳಿರುವ ಕಬ್ಬನ್ನು ಸುತ್ತು ಕಟ್ಟಿದ ಮರದ ರೀಪಿನ ಚೌಕಟ್ಟಿನ ಗೂಟಗಳಿಗೆ ಬಿಗಿದು ನೇರವಾಗಿ ಕಟ್ಟುತ್ತಾರೆ. ಆನಂತರ ಮಾವಿನ ಎಲೆಯ ತೋರಣದಿಂದ ಶೃಂಗರಿಸಿ ಅಪರೂಪವಾಗಿ ಸಿಗುವಂತಹ ಪಾರೆ ಹೂವನ್ನು ಮಾಲೆ ಮಾಡಿ ಎಲ್ಲಾ ಹೂಗಳಿಂದ ಶೃಂಗಾರಗೊಳಿಸುತ್ತಾರೆ. ಜೊತೆಯಲ್ಲಿ ಚಿಕ್ಕದೊಂದು ತುಳಸಿ ಕಟ್ಟೆಯನ್ನು ಮಣ್ಣಿನಿಂದ ರಚಿಸಿ, ಅದಕ್ಕೆ ನೆಲ್ಲಿಕಾಯಿ ಗಿಡದ ಗೆಲ್ಲು ಮತ್ತು ಹುಳಿಮರದ ಗೆಲ್ಲನ್ನು ಇಟ್ಟು ಅದನ್ನು ಅಲಂಕರಿಸುತ್ತಾರೆ. ಈ ರೀತಿ ಮಾಡಿ ಹಣತೆಯನ್ನು ಸುತ್ತು ಕಟ್ಟಿದ ಮರದ ರೀಪಿನ ಚೌಕಟ್ಟಿನಲ್ಲಿಟ್ಟು ಉರಿಸುತ್ತಾರೆ. ಮನೆ ಯಜಮಾನರು ಅಥವಾ ಪುರೋಹಿತರು ಶುಚಿಭೂತರಾಗಿ ಲಕ್ಷ್ಮೀನಾರಾಯಣನ್ನು ಸ್ತುತಿಸುವ ಮಂತ್ರವನ್ನು ಹೇಳಿ ಪೂಜಿಸುತ್ತಾರೆ. ಈ ಸಂದರ್ಭದಲ್ಲಿ ಮನೆಮಕ್ಕಳು ವಿವಿಧ ಪಟಾಕಿಗಳನ್ನು ಸಿಡಿಸಿ ಪೂಜೆಗೆ ಸಂಭ್ರಮವನ್ನು ಕೊಡುತ್ತಾರೆ. ತದನಂತರ ಪುರೋಹಿತ/ಯಜಮಾನ ಮತ್ತು ಮನೆಯವರು ಎಲ್ಲರೂ ತುಳಸಿಕಟ್ಟೆಗೆ ಪ್ರದಕ್ಷಿಣೆ ಬರುತ್ತಾ ಮಂತ್ರವನ್ನು ಪಟಿಸುತ್ತಾರೆ. ಈ ತುಳಸಿ ಪೂಜೆಯನ್ನು ಹಲವು ಪ್ರದೇಶಗಳಲ್ಲಿ ನಾನಾ ರೀತಿಯಲ್ಲಿ ಆಚರಿಸಲಾಗುತ್ತದೆ. ತುಳಸಿ ಪೂಜೆಯ ಬಗ್ಗೆ ಪುರಾಣದಲ್ಲಿ ಬೇರೆ ಬೇರೆ ಕಥೆಗಳಿವೆ. ಅದರಲ್ಲಿ ಒಂದು ಕಥೆ ಹೀಗಿದೆ..
ಧರ್ಮಧ್ವಜ ಮುತ್ತು ಮಾಧವಿಯ ಪುತ್ರಿ. ಧಂಭಾಸುರನ ಮಗನಾದ ಶಂಖಚೂಡನು ಈಕೆಯ ಪತಿ. ಈಕೆಯು ಲಕ್ಷ್ಮಿಯ ಅಂಶದಿಂದ ಹುಟ್ಟಿದವಳು. ಇವಳು ಬಾಲ್ಯದಲ್ಲೇ ಬದರಿಕಾಶ್ರಮಕ್ಕೆ ಹೋಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ವಿಷ್ಣುವನ್ನು ಪತಿಯಾಗುವ ವರ ಪಡೆದರೂ, ಗಿಡವಾಗುವೆ ಎಂದು ಬ್ರಹ್ಮನಲ್ಲಿ ಹೇಳಿದಳು. ಆಕೆ ಮುಂದೆ ನಾರದನ ಸೂಚನೆಯಂತೆ ತಪಸ್ಸಿನಲ್ಲಿ ಸಿದ್ಧಿ ಪಡೆದ ಶಂಖಚೂಡನನ್ನು ವಿವಾಹವಾದಳು. ಈತನು ದೇವತೆಗಳೊಡನೆ ಹೋರಾಡಿ ಮಡಿಯಲು, ವಿಷ್ಣುವು ಶಂಖಚೂಡನ ಆಕಾರದಿಂದ ತುಳಸಿಯ ಸಮೀಪ ಬರಲು ಈಕೆ ವಿಷ್ಣುವೆಂದು ತಿಳಿದು ಗಿಡವಾದಲು. ಸಮುದ್ರ ಮಥನ ಕಾಲದಲ್ಲಿ ಅಮೃತಕಲಶ ಹುಟ್ಟಿ ಬರಲು, ವಿಷ್ಣುವು ಅದನ್ನು ಹಿಡಿದು ಕೊಂಡಾಗ ಅವನ ಕಣ್ಣುಗಳಿಂದ ಆನಂದ ಭಾಷ್ಪವು ಉದುರಿ ಈ ಕಲಶದಲ್ಲಿ ಬೀಳಲು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತ್ತು. ಇದೇ ತುಳಸಿ, ತುಲನೆಯಿಲ್ಲದ ಈ ಗಿಡವನ್ನು ಲಕ್ಷ್ಮಿಯೊಂದಿಗೆ ಶ್ರೀ ವಿಷ್ಣು ವಿವಾಹವಾದನು ಎಂಬುದು ಕಥೆಯ ಸಾರಾಂಶವಾಗಿದೆ. "ನ ಗೃಹಂ ಗೃಹ ಮಿತ್ಯಾಹು; ತುಳಸೀ ಗೃಹಮುಚ್ಯತೇ".
ಮನೆ ಮನೆಯಲ್ಲಿ ತುಳಸಿಯೇ ಮನೆ ಎಂಬುದು ಸಂಸ್ಕೃತ ಸುಭಾಷಿತ. ಮನೆಯೆದುರು ತುಳಸಿ ಇದ್ದರೆ ಮಾತ್ರ ಆ ಮನೆಗೊಂದು ಅರ್ಥ. ಎಂಬುದು ಇದರ ತಾತ್ಪರ್ಯ. ಮನೆಯ ಸುತ್ತಮುತ್ತ ಅಲಂಕಾರಿಕ ಗಿಡಗಳನ್ನು ನೆಟ್ಟು ಅದನ್ನು ಕತ್ತರಿಸಿ ಸುಂದರಗೊಳಿಸುವ ಬದಲು ಪ್ರತಿಯೊಂದು ಭಾಗವು ಉಪಯುಕ್ತವಾಗಿರುವ ತುಳಸಿ ಗಿಡವನ್ನು ನೆಡಬೇಕು. ಆದರೆ ಹೂ ಗೊಂಚಲು ಒಣಗಿದಂತೆ ತುಂಡರಿಸುತ್ತಿದ್ದರೆ ಗಿಡವು ಸುಂದರವಾಗಿ ಬೆಳೆಯುತ್ತದೆ. ಹೊಸ ಮನೆಯ ಪ್ರವೇಶೋತ್ಸವದೊಂದಿಗೆ ತುಳಸಿ ಕಟ್ಟೆಯಲ್ಲಿ ನೆಡಲ್ಪಡುವ ತುಳಸಿ ಸುಲಭವಾಗಿ ಎಲ್ಲೆಡೆ ಕಾಣಸಿಗುವ ಸಸ್ಯವಾಗಿದೆ. ವೇದಕಾಲದಲ್ಲೇ ಪ್ರಸಿದ್ಧವಾಗಿದ್ದ ತುಳಸಿ ಗಿಡದ ಕುರಿತು ಅನೇಕ ಕಥೆಗಳು ನಂಬಿಕೆಗಳು ಬೆಳೆದು ಬಂದಿದೆ. ತುಳಸಿಯಲ್ಲಿ ಕಪ್ಪು ಮಿಶ್ರಿತ ಹಸಿರು ಬಣ್ಣದ "ಕೃಷ್ಣ ತುಳಸಿ" ಮತ್ತು ಬಿಳಿಯ ಜಾತಿಯ "ಶ್ರೀ ತುಳಸಿ" ಎಂಬ ಮುಖ್ಯವಾದ ಎರಡು ತಳಿಗಳನ್ನು ಕಾಣಬಹುದು. ಹರಿಪ್ರಿಯಾ, ಪಾವನೀ, ವೈಷ್ಣವೀ, ಬಹುಮಂಜರೀ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ಈ ತುಳಸಿ ಗಿಡಕ್ಕೆ ಪವಿತ್ರವಾದ ಸ್ಥಾನವಿದ್ದು, ಪೂಜಾರ್ಹವಾದ ಸಸ್ಯವಾಗಿದೆ. ಮಾತ್ರವಲ್ಲದೆ, ಆಯುರ್ವೇದ ಶಾಸ್ತ್ರದಲ್ಲೂ ಅತ್ಯಂತ ಉಪಯುಕ್ತ ಸಸ್ಯವಾಗಿದ್ದು, ಈ ಸಸ್ಯವನ್ನು ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಬೆಳೆಸಿಕೊಂಡಾಗ ನಮ್ಮ ಮನ, ಮನೆ ಮತ್ತು ಪರಿಸರವನ್ನು ಆರೋಗ್ಯವಾಗಿರುಸುತ್ತದೆ. ಅದಕ್ಕೆ ಇರುವ ನಾನಾ ಉಪಯುಕ್ತ ಗುಣಗಳಿಗಾಗಿಯೇ ನಮ್ಮ ಹಿರಿಯರು ಅನಾದಿಕಾಲದಿಂದಲೂ ತುಳಸಿಯನ್ನು ಬೆಳೆಸುತ್ತಾ ಬಂದಿದ್ದಾರೆ. ಮತ್ತು ಅದನ್ನು ಪೂಜಿಸುವ ಪರಿಪಾಠವೂ ಬೆಳೆದು ಬಂದಿದೆ. ಆದ್ದರಿಂದ ಇಂತಹ ಪವಿತ್ರವಾದ ತುಳಸಿಯನ್ನು ಪೂಜಿಸುವುದರಿಂದ ಮನೆ ಮಂದಿಗೂ ಹಾಗೂ ಲೋಕದ ಎಲ್ಲಾ ಜನತೆಗೂ ಶಾಂತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ..
ತುಲಸಿ ಶ್ರೀ ಸಖಿಶುಭೇ ಪಾಪಹಾರಿಣಿ ಪುಣ್ಯತೇ
ನಮಸ್ತೆ ನಾರದಾನುತೆ ನಾರಾಯಣ ಮನಃಪ್ರಿಯೇ |
ಸರ್ವ ಕಾಮದುಷೇ ದೇವಿ ಸರ್ವತೀರ್ಥಾ ಬಿ ಶೇಚಿನಿ ಪಾವನಿ ಸುರಭಿ ಶ್ರೇಷ್ಟೆ ದೇವಿ ತುಭ್ಯಂ ನಮೋ ನಮಃ || ಜಗತ್ತಿನಲ್ಲಿರುವ ಎಲ್ಲಾ ಪ್ರಾಣಿ, ಪಕ್ಷಿ ಮತ್ತು ಮನುಷ್ಯರ ಎಲ್ಲಾ ವಿಧದ ಪಾಪ, ದೋಷಗಳನ್ನು ನಿವಾರಿಸಿ ನಾರದರಿಂದ ಸ್ತುತಿಸಲ್ಪಟ್ಟು ಶ್ರೀಮನ್ನಾರಾಯಣನ ಮನಸ್ಸಿಗೆ ಪ್ರಿಯಳಾಗಿ ಎಲ್ಲಾ ವಿಧದ ಬಯಕೆಯನ್ನು ಈಡೇರಿಸಿ ಸರ್ವತೀರ್ಥಾದಿಗಳಿಂದ ಅಭಿಷೇಕ ಮಾಡಲ್ಪಟ್ಟು, ಇಂದ್ರಾದಿ ದೇವತೆಗಳಿಂದ ಪೂಜಿಸಲ್ಪಟ್ಟ ಶ್ರೀ ಮಾತೆಯಾದ ತುಳಸಿ ದೇವಿಗೆ ಭಕ್ತಿ ಶ್ರದ್ಧಾ ಪೂರ್ವಕ ನಮನ..
✍️ ಶ್ರುತಿ ರತನ್ ಕುಮಾರ್ ಹೊಸಂಗಡಿ, ಮಂಜೇಶ್ವರ.
📸 ದೀಪಕ್ ರಾಜ್ ಉಪ್ಪಳ.(ಚಿತ್ರಗಳು ಸಾಂಧರ್ಬಿಕ)